ಡೆನ್ಮಾರ್ಕ್ ಓಪನ್ | ಕ್ವಾರ್ಟರ್ಫೈನಲ್ನಲ್ಲಿ ಸೋತ ಟ್ರೀಸಾ-ಗಾಯತ್ರಿ

Photo Credit : PTI
ಒಡೆನ್ಸ್: ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಅವರ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಅಭಿಯಾನವು ಕ್ವಾರ್ಟರ್ ಫೈನಲ್ನಲ್ಲಿ ಅಂತ್ಯಗೊಂಡಿದೆ.
ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ನ ಅಂತಿಮ-8ರ ಸುತ್ತಿನ ಪಂದ್ಯದಲ್ಲಿ ಟ್ರೀಸಾ-ಗಾಯತ್ರಿ ಮಲೇಶ್ಯದ ಎರಡನೇ ಶ್ರೇಯಾಂಕದ ಜೋಡಿ ಪೀರ್ಲಿ ಟಾನ್ ಹಾಗೂ ತಿನಾ ಮುರಳೀಧರನ್ ವಿರುದ್ಧ 21-14, 17-21, 11-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.
ಭಾರತೀಯ ಜೋಡಿಯು ಮೊದಲ ಗೇಮ್ನಲ್ಲಿ 8-4 ಮುನ್ನಡೆಯೊಂದಿಗೆ ಉತ್ತಮ ಆರಂಭ ಪಡೆದಿತ್ತು. ಮಧ್ಯಂತರದಲ್ಲಿ ಭಾರತೀಯರು 11-7ರಿಂದ ಮುನ್ನಡೆಯಲ್ಲಿದ್ದರು. ಗಾಯತ್ರಿ ಹಾಗೂ ಟ್ರೀಸಾ ಕೊನೆಯಲ್ಲಿ ಒತ್ತಡಕ್ಕೆ ಸಿಲುಕಿದರೂ ಮೊದಲ ಗೇಮ್ ಅನ್ನು 21-14 ಅಂತರದಿಂದ ಗೆದ್ದುಕೊಂಡರು.
ವಿಶ್ವದ ನಂ.18ನೇ ಜೋಡಿ ಎರಡನೇ ಗೇಮ್ನಲ್ಲಿ ಟಾನ್ ಹಾಗೂ ಮುರಳೀಧರನ್ ವಿರುದ್ಧ 6-4 ಅಂತರದಿಂದ ಮುನ್ನಡೆ ಸಾಧಿಸಿತು. ಭಾರತೀಯ ಜೋಡಿಯು ತಮ್ಮ ರೊಟೇಶನ್ಗಳಲ್ಲಿ ಪರದಾಡಿದ್ದು, ಮಲೇಶ್ಯದ ಜೋಡಿ ಅವಕಾಶಗಳನ್ನು ಬಳಸಿಕೊಂಡಿತು. ಅಂತಿಮವಾಗಿ ಮಲೇಶ್ಯ ಆಟಗಾರ್ತಿಯರು ಎರಡನೇ ಗೇಮ್ ಅನ್ನು 21-17ರಿಂದ ಗೆದ್ದುಕೊಂಡು ಪಂದ್ಯವನ್ನು ನಿರ್ಣಾಯಕ ಹಂತಕ್ಕೆ ವಿಸ್ತರಿಸಿದರು.
ಮೂರನೇ ಗೇಮ್ನಲ್ಲಿ ಮಲೇಶ್ಯದ ಜೋಡಿಯು 7-2 ಮುನ್ನಡೆ ಪಡೆಯಿತು. ಮಧ್ಯಂತರದಲ್ಲಿ ಭಾರತೀಯರು 4-11ರಿಂದ ಹಿನ್ನಡೆ ಅನುಭವಿಸಿದರು. ಟಾನ್ ಹಾಗೂ ಮುರಳೀಧರನ್ ಮೂರನೇ ಗೇಮ್ ಅನ್ನು 21-11ರಿಂದ ಗೆದ್ದುಕೊಂಡರು.
ಭಾರತೀಯ ಆಟಗಾರ್ತಿಯರು ಅಕ್ಟೋಬರ್ 20ರಿಂದ 25ರ ತನಕ ನಡೆಯಲಿರುವ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.






