ಎಸಿಸಿ ಟೂರ್ನಿಗಳಿಂದ ಹೊರಗುಳಿಯಲು ಬಿಸಿಸಿಐ ನಿರ್ಧಾರ ಕೈಗೊಂಡಿಲ್ಲ: ದೇವಜಿತ್ ಸೈಕಿಯಾ

ದೇವಜಿತ್ ಸೈಕಿಯಾ | PC: X \ @airnewsalerts
ಮುಂಬೈ: ಎರಡು ನೆರೆಯ ರಾಷ್ಟ್ರಗಳ ನಡುವೆ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿಸಲು ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ)ಆಯೋಜಿಸುತ್ತಿರುವ ಪಂದ್ಯಾವಳಿಗಳಿಂದ ಹೊರಗುಳಿಯಲು ಬಿಸಿಸಿಐ ನಿರ್ಧರಿಸಿದೆ ಎಂಬ ವರದಿಯನ್ನು ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ದೇವಜಿತ್ ಸೈಕಿಯಾ ನಿರಾಕರಿಸಿದ್ದಾರೆ.
‘‘ಎಸಿಸಿಯ ಎರಡು ಟೂರ್ನಿಗಳಾದ ಏಶ್ಯಕಪ್ ಹಾಗೂ ಮಹಿಳಾ ಉದಯೋನ್ಮುಖ ತಂಡಗಳ ಏಶ್ಯಕಪ್ನಲ್ಲಿ ಭಾಗವಹಿಸದಿರಲು ಬಿಸಿಸಿಐ ಇಂತಹ ನಿರ್ಧಾರ ತೆಗೆದುಕೊಂಡಿರುವ ಬಗ್ಗೆ ಕೆಲವು ಸುದ್ದಿಗಳು ಇಂದು ಬೆಳಗ್ಗೆ ನನ್ನ ಗಮನಕ್ಕೆ ಬಂದಿವೆ. ಇಂತಹ ಸುದ್ದಿಗಳು ಸತ್ಯಕ್ಕೆ ದೂರವಾಗಿದ್ದು, ಇದು ಸಂಪೂರ್ಣ ಊಹಾತ್ಮಕ ಹಾಗೂ ಕಾಲ್ಪನಿಕ. ಇಲ್ಲಿಯ ತನಕ ಬಿಸಿಸಿಐ ಮುಂಬರುವ ಎಸಿಸಿ ಟೂರ್ನಿಗಳ ಬಗ್ಗೆ ಚರ್ಚಿಸಿಲ್ಲ ಅಥವಾ ಅಂತಹ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಂತದಲ್ಲಿ ನಮ್ಮ ಹೆಚ್ಚಿನ ಗಮನ ಈಗ ನಡೆಯುತ್ತಿರುವ ಐಪಿಎಲ್ ಹಾಗೂ ಇಂಗ್ಲೆಂಡ್ ಸರಣಿಯತ್ತ ನೆಟ್ಟಿದೆ’’ಎಂದು ಸೈಕಿಯಾ ಹೇಳಿದ್ದಾರೆ.
ಮುಂದಿನ ತಿಂಗಳು ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳಾ ಉದಯೋನ್ಮುಖ ತಂಡಗಳ ಏಶ್ಯಕಪ್ ಹಾಗೂ ಸೆಪ್ಟಂಬರ್ನಲ್ಲಿ ಭಾರತ ಆತಿಥೇಯ ರಾಷ್ಟ್ರವಾಗಿರುವ ಪುರುಷರ ಏಶ್ಯಕಪ್ ನಿಂದ ಹಿಂದೆ ಸರಿಯುವ ನಿರ್ಧಾರವನ್ನು ಬಿಸಿಸಿಐ ಈಗಾಗಲೇ ಎಸಿಸಿಗೆ ತಿಳಿಸಿದೆ ಎಂದು ವರದಿಯಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮುಹ್ಸಿನ್ ನಖ್ವಿ ಈಗ ಎಸಿಸಿ ಮುಖ್ಯಸ್ಥರಾಗಿದ್ದಾರೆ. ನಖ್ವಿ ಪಾಕಿಸ್ತಾನ ಸರಕಾರದ ಆಂತರಿಕ ಸಚಿವರೂ ಆಗಿದ್ದಾರೆ. ಈ ಕಾರಣದಿಂದ ಬಿಸಿಸಿಐ ಈ ಹೆಜ್ಜೆ ಇಟ್ಟಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಏಶ್ಯಕಪ್ ಸೆಪ್ಟಂಬರ್ ನಲ್ಲಿ ಭಾರತದ ಆತಿಥ್ಯದಲ್ಲಿ ನಡೆಯುವ ಸಾಧ್ಯತೆಯಿದೆ. ಒಂದು ವೇಳೆ ಭಾರತ ಈ ಟೂರ್ನಿಯಿಂದ ಹೊರಗುಳಿದರೆ ಪಂದ್ಯಾವಳಿಯು ಸಂಕಷ್ಟಕ್ಕೆ ಸಿಲುಕಲಿದೆ. ಭಾರತ-ಪಾಕಿಸ್ತಾನ ಪಂದ್ಯ ಇರದಿದ್ದರೆ ಏಶ್ಯಕಪ್ ಗೆ ಮಹತ್ವ ಕಳೆದುಕೊಳ್ಳಲಿದೆ.







