ದೇವೇಂದ್ರ ಝಝಾರಿಯ ಭಾರತೀಯ ಪ್ಯಾರಾಲಿಂಪಿಕ್ ಸಮಿತಿಯ ನೂತನ ಅಧ್ಯಕ್ಷ

ದೇವೇಂದ್ರ ಝಝಾರಿಯ \ Photo ; ANI
ಹೊಸದಿಲ್ಲಿ: ಭಾರತೀಯ ಪ್ಯಾರಾಲಿಂಪಿಕ್ ಸಮಿತಿ (ಪಿಸಿಐ)ಯ ನೂತನ ಅಧ್ಯಕ್ಷರಾಗಿ ಕ್ರೀಡಾಪಟು ದೇವೇಂದ್ರ ಝಝಾರಿಯರನ್ನು ಶನಿವಾರ ಆರಿಸಲಾಗಿದೆ.
ಎರಡು ಬಂಗಾರ ಮತ್ತು ಒಂದು ಬೆಳ್ಳಿ ಸೇರಿದಂತೆ ಪ್ಯಾರಾಲಿಂಪಿಕ್ಸ್ ನಲ್ಲಿ ಮೂರು ಪದಕಗಳನ್ನು ಗೆದ್ದಿರುವ 42 ವರ್ಷದ ಜಾವೆಲಿನ್ ಎಸೆತಗಾರ ಝಝಾರಿಯ, ದೀಪಾ ಮಲಿಕ್ರಿಂದ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.
ಪಿಸಿಐ ಕಾರ್ಯಕಾರಿ ಸಮಿತಿಯ ಅವಧಿ ಮುಗಿದ ಬಳಿಕವೂ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಪಿಸಿಐಯ ಮಾನ್ಯತೆಯನ್ನು ಕ್ರೀಡಾ ಸಚಿವಾಲಯ ಫೆಬ್ರವರಿಯಲ್ಲಿ ಅಮಾನತಿನಲ್ಲಿಟ್ಟಿತ್ತು. ಮಾರ್ಚ್ 28ರಂದು ಚುನಾವಣೆ ನಡೆಸುವ ಪಿಸಿಐಯ ನಿರ್ಧಾರಕ್ಕೆ ಸೂಕ್ತ ಕಾರಣಗಳಿಲ್ಲ ಎಂದು ಸಚಿವಾಲಯ ಹೇಳಿತ್ತು.
ಅಮಾನತಿನ ಬಳಿಕ, ಮಾರ್ಚ್ 9ರಂದು ಹೊಸದಿಲ್ಲಿಯಲ್ಲಿ ಚುನಾವಣೆ ನಡೆಸುವುದಾಗಿ ಪಿಸಿಐ ಘೋಷಿಸಿತ್ತು.
ಕ್ರೀಡಾ ಸಚಿವಾಲಯವು ಮಂಗಳವಾರ, ತಕ್ಷಣದಿಂದ ಜಾರಿಗೆ ಬರುವಂತೆ ಪಿಸಿಐಯ ಅಮಾನತನ್ನು ಹಿಂದಕ್ಕೆ ಪಡೆದಿತ್ತು.
Next Story





