2.2 ಕೋ.ರೂ.ಗೆ ಸಿ ಎಸ್ ಕೆ ಸೇರಿದ ಡೆವಾಲ್ಡ್ ಬ್ರೆವಿಸ್

ಡೆವಾಲ್ಡ್ ಬ್ರೆವಿಸ್ | PC : X
ಹೊಸದಿಲ್ಲಿ: ಗಾಯಗೊಂಡಿರುವ ಗುರ್ಜಪ್ನೀತ್ ಸಿಂಗ್ ಬದಲಿಗೆ 2025ರ ಆವೃತ್ತಿಯ ಐಪಿಎಲ್ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ)ದಕ್ಷಿಣ ಆಫ್ರಿಕಾದ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ಸೇವೆಯನ್ನು ಬಳಸಿಕೊಳ್ಳಲು ಮುಂದಾಗಿದೆ.
21ರ ಹರೆಯದ ಬ್ರೆವಿಸ್ ಫ್ರಾಂಚೈಸಿ ಕ್ರಿಕೆಟ್ನಲ್ಲಿ ಉದಯೋನ್ಮುಖ ಸ್ಟಾರ್ ಆಗಿದ್ದು, ಐಪಿಎಲ್, ಸಿಪಿಎಲ್, ಎಂಎಲ್ಸಿ ಹಾಗೂ ಎಸ್ಎ20ಯಂತಹ ಲೀಗ್ಗಳಲ್ಲಿ ಆಡಿ ಗಮನ ಸೆಳೆದಿದ್ದಾರೆ.
2023ರ ಆವೃತ್ತಿಯ ದಕ್ಷಿಣ ಆಫ್ರಿಕಾ 20 ಋತುವಿನಲ್ಲಿ 184.17ರ ಸ್ಟ್ರೈಕ್ರೇಟ್ನಲ್ಲಿ 291 ರನ್ ಗಳಿಸಿ 6ನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿದ್ದ ಬ್ರೆವಿಸ್ ಮುಂಬೈ ಇಂಡಿಯನ್ಸ್ ಕೇಪ್ಟೌನ್ ತಂಡವು ತನ್ನ ಮೊದಲ ಪ್ರಶಸ್ತಿ ಗೆಲ್ಲುವಲ್ಲಿ ನೆರವಾಗಿದ್ದರು.
ಬ್ರೆವಿಸ್ 81 ಟಿ-20 ಪಂದ್ಯಗಳನ್ನು ಆಡಿದ್ದು, 1,787 ರನ್ ಗಳಿಸಿದ್ದು, 162 ಗರಿಷ್ಠ ಸ್ಕೋರಾಗಿದೆ. 2023ರಲ್ಲಿ ದಕ್ಷಿಣ ಆಫ್ರಿಕಾದ ಪರ ತನ್ನ ಚೊಚ್ಚಲ ಟಿ-20 ಪಂದ್ಯವನ್ನು ಆಡಿದ್ದ ಬ್ರೆವಿಸ್ ಚುಟುಕು ಮಾದರಿಯ ಕ್ರಿಕೆಟ್ನಲ್ಲಿ ಪ್ರಾಬಲ್ಯ ಸಾಧಿಸಿ ತನ್ನ ಸಾಮರ್ಥ್ಯ ತೋರ್ಪಡಿಸಿದ್ದರು.
ಈ ಹಿಂದೆ ಮುಂಬೈ ಇಂಡಿಯನ್ಸ್ ಪರ 10 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದಾರೆ.
ಸಿಎಸ್ಕೆ 2.2 ಕೋ.ರೂ.ಗೆ ಬ್ರೆವಿಸ್ರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈಗಾಗಲೇ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 4 ಶತಕಗಳನ್ನು ಸಿಡಿಸಿರುವ ಬ್ರೆವಿಸ್ ಸಿಎಸ್ಕೆ ಪರ ಚೊಚ್ಚಲ ಪಂದ್ಯ ಆಡುವ ಅವಕಾಶ ಲಭಿಸಿದರೆ ಮಿಂಚುವುದಕ್ಕೆ ಸಜ್ಜಾಗಿದ್ದಾರೆ.







