ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡ ಧೋನಿಗೆ ಬಿಸಿಸಿಐ ಅಭಿನಂದನೆ

ಮುಂಬೈ: ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡ ಭಾರತದ ವಿಶ್ವಕಪ್ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಭಿನಂದಿಸಿದೆ.
ಲಂಡನ್‌ನಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಅವರನ್ನು ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳಿಸಲಾಗಿತ್ತು. ಧೋನಿ ಈ ಪ್ರತಿಷ್ಠಿತ ಗುಂಪಿಗೆ ಸೇರಿದ 11ನೇ ಭಾರತೀಯ ಕ್ರಿಕೆಟಿಗನಾಗಿದ್ದಾರೆ.
ಕ್ರಿಕೆಟ್‌ನ ಭವ್ಯ ಇತಿಹಾಸಕ್ಕೆ ಅಮೋಘ ದೇಣಿಗೆಗಳನ್ನು ನೀಡುವ ಕ್ರಿಕೆಟ್ ದಂತಕತೆಗಳನ್ನು ಐಸಿಸಿ ಹಾಲ್ ಆಫ್ ಫ್ರೇಮ್ ಗೌರವಿಸುತ್ತದೆ. ಆಟಗಾರರ ಕೊನೆಯ ಅಂತರ್‌ರಾಷ್ಟ್ರೀಯ ಪಂದ್ಯದ ಐದು ವರ್ಷಗಳ ಬಳಿಕ ಅವರು ಈ ಗೌರವಕ್ಕೆ ಅರ್ಹರಾಗುತ್ತಾರೆ.
‘‘ಐಸಿಸಿ ಹಾಲ್ ಆಫ್ ಫೇಮ್ ಮುಖಾಂತರ ನಾವು ಕ್ರೀಡೆ ಕಂಡ ಅಮೋಘ ಆಟಗಾರರನ್ನು ಗೌರವಿಸುತ್ತೇವೆ. ಇಂಥ ಆಟಗಾರರ ಅಸಾಧಾರಣ ಆಟವು ಕ್ರಿಕೆಟ್‌ನ ಪರಂಪರೆಯನ್ನು ರೂಪಿಸಿದೆ ಮತ್ತು ತಲೆಮಾರುಗಳಿಗೆ ಪ್ರೇರೇಪಣೆ ನೀಡಿದೆ’’ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ಹೇಳಿದ್ದಾರೆ.
‘‘ಈ ವರ್ಷ, ಏಳು ಶ್ರೇಷ್ಠ ಆಟಗಾರರನ್ನು ಈ ಪ್ರತಿಷ್ಠಿತ ಗುಂಪಿಗೆ ಸೇರ್ಪಡೆಗೊಳಿಸಲು ನಮಗೆ ಸಂತೋಷವಾಗುತ್ತಿದೆ. ಐಸಿಸಿಯ ಪರವಾಗಿ ಪ್ರತಿಯೊಬ್ಬರನ್ನೂ ನಾನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ’’ ಎಂದು ಅವರು ಹೇಳಿದರು.
ಐಸಿಸಿಯ ಶತಮಾನ ಸಂಭ್ರಮಾಚರಣೆಯ ಸಂದರ್ಭದಲ್ಲಿ 2009 ಜನವರಿಯಲ್ಲಿ ಹಾಲ್ ಆಫ್ ಫೇಮ್ ಪ್ರಶಸ್ತಿಯನ್ನು ಸ್ಥಾಪಿಸಲಾಗಿತ್ತು. 2025ರ ಐಸಿಸಿ ಹಾಲ್ ಆಫ್ ಫೇಮ್ ಕ್ಲಾಸ್‌ಗೆ ಧೋನಿ ಜೊತೆಗೆ, ಹಾಶಿಮ್ ಅಮ್ಲ, ಮ್ಯಾಥ್ಯೂ ಹೇಡನ್, ಗ್ರೇಮ್ ಸ್ಮಿತ್, ಡೇನಿಯಲ್ ವೆಟರಿ, ಸನಾ ಮಿರ್ ಮತ್ತು ಸಾರಾ ಟೇಲರ್‌ರನ್ನು ಸೇರ್ಪಡೆಗೊಳಿಸಲಾಗಿದೆ.