ಧೋನಿಯ 100 ಕೋಟಿ ರೂ. ಮಾನನಷ್ಟ ಮೊಕದ್ದಮೆಗೆ 11 ವರ್ಷ ಬಳಿಕ ಚಾಲನೆ

ಮಹೇಂದ್ರ ಸಿಂಗ್ ಧೋನಿ | PC : PTI
ಚೆನ್ನೈ, ಆ. 12: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೂಡಿರುವ ದಶಕದ ಹಳೆಯ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಕೊನೆಗೂ ವೇದಿಕೆ ಸಿದ್ಧವಾಗಿದೆ. ವಿಚಾರಣೆಯನ್ನು ಆರಂಭಿಸುವಂತೆ ಮದರಾಸು ಹೈಕೋರ್ಟ್ ಸೋಮವಾರ ಆದೇಶ ನೀಡಿದೆ.
ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ತನ್ನನ್ನು ತಪ್ಪಾಗಿ ತಳುಕು ಹಾಕಿದ್ದಾರೆ ಎಂದು ಆರೋಪಿಸಿ ಧೋನಿ ಅವರು ಝೀ ಮೀಡಿಯ ಕಾರ್ಪೊರೇಶನ್, ಪತ್ರಕರ್ತ ಸುಧೀರ್ ಚೌಧರಿ, ನಿವೃತ್ತ ಐಪಿಎಸ್ ಅಧಿಕಾರಿ ಜಿ. ಸಂಪತ್ ಕುಮಾರ್ ಮತ್ತು ನ್ಯೂಸ್ ನೇಶನ್ ನೆಟ್ವರ್ಕ್ ವಿರುದ್ಧ 100 ಕೋಟಿ ರೂ. ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಈ ವರ್ಷದ ಅಕ್ಟೋಬರ್ 20 ಮತ್ತು ಡಿಸೆಂಬರ್ 10ರ ನಡುವೆ ವಿಚಾರಣೆ ಮತ್ತು ಪಾಟಿ ಸವಾಲಿಗೆ ತಾನು ಲಭ್ಯನಿದ್ದೇನೆ ಎಂಬುದಾಗಿ ಧೋನಿ ಅಫಿದಾವಿತ್ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಚೆನ್ನೈಯಲ್ಲಿ ಪರಸ್ಪರ ಸಮ್ಮತವಾಗಿರುವ ಸ್ಥಳವೊಂದರಲ್ಲಿ ಧೋನಿಯ ಸಾಕ್ಷ್ಯವನ್ನು ದಾಖಲಿಸಲು ನ್ಯಾ. ಸಿ.ವಿ. ಕಾರ್ತಿಕೇಯನ್ ಅಡ್ವೊಕೇಟ್ ಕಮಿಶನರ್ ಒಬ್ಬರನ್ನು ನೇಮಿಸಿದ್ದಾರೆ. ನ್ಯಾಯಾಲಯದ ಆವರಣದಲ್ಲಿ ಸಂಭವಿಸಬಹುದಾದ ಅಡಚಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಧೋನಿ ತನ್ನ ಮಾನನಷ್ಟ ಮೊಕದ್ದಮೆಯನ್ನು 2014ರಲ್ಲಿ ಹೂಡಿದ್ದಾರೆ. ನಾನು ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ನಲ್ಲಿ ತೊಡಗಿದ್ದೇನೆ ಎಂಬುದಾಗಿ ಸೂಚಿಸುವ ‘‘ತಪ್ಪು ಮತ್ತು ಮಾನಹಾನಿಕರ’’ ವರದಿಗಳನ್ನು ಪ್ರತಿವಾದಿಗಳು ಆ ವರ್ಷದ ಫೆಬ್ರವರಿ 11ರಿಂದ ಪ್ರಸಾರಿಸುತ್ತಿದ್ದಾರೆ ಮತ್ತು ಪ್ರಕಟಿಸುತ್ತಿದ್ದಾರೆ ಎಂಬುದಾಗಿ ಧೋನಿ ಆರೋಪಿಸಿದ್ದಾರೆ.
ಪ್ರತಿವಾದಿಗಳು ಸಲ್ಲಿಸಿರುವ ಹಲವಾರು ಅರ್ಜಿಗಳು ಮತ್ತು ವಿಧಿವಿಧಾನಗಳಿಗೆ ಸಂಬಂಧಿಸಿದ ಸವಾಲುಗಳಿಂದಾಗಿ ಅರ್ಜಿಯ ವಿಚಾರಣೆಯು 11 ವರ್ಷಗಳಷ್ಟು ವಿಳಂಬವಾಗಿದೆ.







