ಸತತ 2ನೇ ಶತಕ: ದಾಖಲೆ ನಿರ್ಮಿಸಿದ ಧ್ರುವ ಜುರೆಲ್

ಧ್ರುವ ಜುರೆಲ್ |PC ; PTI
ಬೆಂಗಳೂರು, ನ.8: ಭಾರತ ‘ಎ’ ತಂಡದ ಬ್ಯಾಟರ್ ಧ್ರುವ ಜುರೆಲ್ ದಕ್ಷಿಣ ಆಫ್ರಿಕಾ ‘ಎ’ ತಂಡದ ವಿರುದ್ಧ ಬಿಸಿಸಿಐ ಮೈದಾನದಲ್ಲಿ ನಡೆಯುತ್ತಿರುವ 2ನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಸತತ 2ನೇ ಶತಕ ದಾಖಲಿಸಿದರು. ಈ ಸಾಧನೆ ಮಾಡಿದ ಭಾರತದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
‘ಎ-ಟೆಸ್ಟ್’ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲಿ ಶತಕ ಗಳಿಸಿರುವ ಜುರೆಲ್ ಅವರು ನಮನ್ ಓಜಾ ಅವರ ದಾಖಲೆಯನ್ನು ಸರಿಗಟ್ಟಿದರು. ಓಜಾ 2014ರ ಜುಲೈನಲ್ಲಿ ಬ್ರಿಸ್ಬೇನ್ನಲ್ಲಿ ನಡೆದ ಆಸ್ಟ್ರೇಲಿಯ ‘ಎ’ ವಿರುದ್ಧದ ಪಂದ್ಯದಲ್ಲಿ ಔಟಾಗದೆ 219 ಹಾಗೂ ಔಟಾಗದೆ 101 ರನ್ ಗಳಿಸಿದ್ದರು.
ಜುರೆಲ್ ಅವರು ಸರಣಿಯ ಮೊದಲ ಚತುರ್ದಿನ ಪಂದ್ಯದಲ್ಲೂ ಶತಕ ಗಳಿಸಿದ್ದಾರೆ. 2ನೇ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ಔಟಾಗದೆ 132 ರನ್ ಗಳಿಸಿದ್ದ ಜುರೆಲ್ ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿದ್ದಾರೆ.
ಭಾರತ ತಂಡವು 4 ವಿಕೆಟ್ ಗಳ ನಷ್ಟಕ್ಕೆ 108 ರನ್ ಗಳಿಸಿದ್ದಾಗ ನಾಯಕ ರಿಷಭ್ ಪಂತ್ ಗಾಯಾಳುವಾಗಿ ನಿವೃತ್ತಿಯಾದರು. ಆಗ ಕ್ರೀಸಿಗಿಳಿದ ವಿಕೆಟ್ ಕೀಪರ್-ಬ್ಯಾಟರ್ ತಾಳ್ಮೆಯಿಂದ ಇನಿಂಗ್ಸ್ ಕಟ್ಟಿದರು. 159 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ ಶತಕ ತಲುಪಿದರು. ಹರ್ಷ ದುಬೆ ಜೊತೆ 184 ರನ್ ಜೊತೆಯಾಟ ನಡೆಸಿದರು. ಶನಿವಾರ 3ನೇ ದಿನದಾಟದಲ್ಲಿ ಭಾರತ ‘ಎ’ ತಂಡವು ಇನಿಂಗ್ಸ್ ಡಿಕ್ಲೇರ್ ಮಾಡಿದಾಗ ಜುರೆಲ್ ಔಟಾಗದೆ 127 ರನ್ ಗಳಿಸಿದ್ದರು.
ಕೆಂಪು-ಚೆಂಡಿನ ಕ್ರಿಕೆಟ್ ನಲ್ಲಿ ಪ್ರಬುದ್ಧತೆ ಮೆರೆಯುತ್ತಿರುವ ಜುರೆಲ್ ಅವರ 170 ಎಸೆತಗಳ ಇನಿಂಗ್ಸ್ನಲ್ಲಿ 15 ಬೌಂಡರಿ ಹಾಗೂ 1 ಸಿಕ್ಸರ್ ಇದ್ದವು.







