ಏಶ್ಯನ್ ಗೇಮ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ತಾರತಮ್ಯ: ಅಮಿತ್ ಪಾಂಘಾಲ್

ಹೊಸದಿಲ್ಲಿ: ಏಷ್ಯನ್ ಕ್ರೀಡಾಕೂಟಕ್ಕಾಗಿ ಭಾರತೀಯ ತಂಡದಲ್ಲಿ ಆಯ್ಕೆ ಮಾಡದ ಬಗ್ಗೆ ರಾಷ್ಟ್ರೀಯ ಒಕ್ಕೂಟ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿರುವ ವಿಶ್ವ ಚಾಂಪಿಯನ್ಶಿಪ್ ಬೆಳ್ಳಿ ಪದಕ ವಿಜೇತ ಬಾಕ್ಸರ್ ಅಮಿತ್ ಪಾಂಘಾಲ್ ಅವರು ರಾಷ್ಟ್ರೀಯ ಶಿಬಿರದಲ್ಲಿದ್ದ ಸಮಯ ವ್ಯರ್ಥವಾಗಿದೆ ಎಂಬ ಭಾವನೆ ಉಂಟಾಗಿದೆ. ಏಶ್ಯನ್ ಗೇಮ್ಸ್ ಆಯ್ಕೆ ಪ್ರಕ್ರಿಯೆಯು ತಾರತಮ್ಯದಿಂದ ಕೂಡಿದೆ ಎಂದು ಆರೋಪಿಸಿದರು.
ಪುರುಷರ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಬೆಳ್ಳಿ ಪದಕ ಜಯಿಸಿ ದೇಶಕ್ಕೆ ಏಕೈಕ ಪದಕ ಗೆದ್ದುಕೊಟ್ಟಿರುವ ಅಮಿತ್ ಪಾಂಘಾಲ್ , ಇತರ ಇಬ್ಬರು ಬಾಕ್ಸರ್ಗಳಾದ ಸಾಗರ್ ಅಹ್ಲಾವತ್ ಹಾಗೂ ರೋಹಿತ್ ಮೊರ್ ಬಾಕ್ಸಿಂಗ್ ಒಕ್ಕೂಟದ ವಿರುದ್ಧ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ
ಸೆಪ್ಟೆಂಬರ್ 23 ರಿಂದ ಚೀನಾದಲ್ಲಿ ನಡೆಯಲಿರುವ ಏಶ್ಯನ್ ಗೇಮ್ಸ್ ಗೆ ಭಾರತೀಯ ತಂಡದಿಂದ ತನ್ನನ್ನು ಹೊರಗಿಟ್ಟ ನಂತರ ನ್ಯಾಯಾಲಯದ ಮೊರೆ ಹೋಗಿದ್ದಾರೆ.
"ನನಗೆ ಟ್ರಯಲ್ಸ್ ನಲ್ಲಿ ಭಾಗವಹಿಸಲು ಸೂಚಿಸಲಾಗಿದೆ. ಈ ಹೊಸ ಪಾಯಿಂಟ್ಸ್ ವ್ಯವಸ್ಥೆ ನನಗೆ ಅರ್ಥವಾಗುತ್ತಿಲ್ಲ" ಎಂದು ಏಷ್ಯನ್ ಗೇಮ್ಸ್ ಲೈಟ್ ಫ್ಲೈವೈಟ್ ಹಾಲಿ ಚಾಂಪಿಯನ್ ಶನಿವಾರ ಪಿಟಿಐಗೆ ತಿಳಿಸಿದರು.
"ವಿಶ್ವ ಚಾಂಪಿಯನ್ಶಿಪ್ ಗಳಲ್ಲಿಯೂ ಸಹ, ಈ ವ್ಯವಸ್ಥೆಯನ್ನು ಆಧರಿಸಿ ನನ್ನ ತೂಕದ ವಿಭಾಗದಲ್ಲಿ ಆಯ್ಕೆಯಾದ ಬಾಕ್ಸರ್ (ದೀಪಕ್) ನಾನು 5-0 ಗೋಲುಗಳಿಂದ ಸೋಲಿಸಿದ್ದ ಬಾಕ್ಸರ್ ವಿರುದ್ಧ ಸೋತಿದ್ದ. ಆದರೆ ಆತ ಇನ್ನೂ ಮುಂದುವರಿದಿದ್ದಾರೆ. ಕಳೆದ ವರ್ಷ ಕಾಮನ್ ವೆಲ್ತ್ ಗೇಮ್ಸ್ ಟ್ರಯಲ್ಸ್ ನಲ್ಲಿ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ವಿಜೇತ ದೀಪಕ್ ಭೋರಿಯಾನನ್ನು ನಾನು ಸೋಲಿಸಿದ್ದೆ. ದೀಪಕ್ 51 ಕೆಜಿ ವಿಭಾಗದಲ್ಲಿ ಏಶ್ಯನ್ ಗೇಮ್ಸ್ ಗೆ ಆಯ್ಕೆಯಾಗಿದ್ದಾರೆ. ಈ ಹಿಂದಿನ ಟ್ರಯಲ್ಸ್ ನಲ್ಲಿ ದೀಪಕ್ ನನ್ನು ನಾನು ಸೋಲಿಸಿದ್ದೆ. ಅಂಕದ ವ್ಯವಸ್ಥೆಯಲ್ಲೂ ನಾನು ಅವನಿಗಿಂತ ಮುಂದಿದ್ದೇನೆ.ಆದರೆ ಅಂತಿಮವಾಗಿ ನಾನು 2ನೇ ಸ್ಥಾನಕ್ಕೆ ತಳ್ಳಲ್ಪಟ್ಟೆ. ಶಿಬಿರದಲ್ಲಿ ನನ್ನನ್ನು ಕಡೆಗಣಿಸಲಾಗಿದೆ. ಏಕೆಂದರೆ ಅವರು ತಮ್ಮ ವ್ಯಕ್ತಿಯನ್ನು ಕಳುಹಿಸಲು ಬಯಸಿದ್ದರು. ಈಗಿನ ಹೊಸ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಅಮಿತ್ ಹೇಳಿದ್ದಾರೆ.