ಏಶ್ಯನ್ ಗೇಮ್ಸ್ ಗೆ ಕಡೆಗಣನೆ: ಕ್ರೀಡಾ ಸಚಿವಾಲಯ ವಿರುದ್ಧ ದೀಪಾ ಕರ್ಮಾಕರ್ ಕಿಡಿ

ದೀಪಾ ಕರ್ಮಾಕರ್ | Photo: NDTV
ಹೊಸದಿಲ್ಲಿ: ಏಶ್ಯನ್ ಗೇಮ್ಸ್ ಗಾಗಿ ಆಯ್ಕೆ ಮಾಡಿರುವ ಭಾರತೀಯ ತಂಡದಿಂದ ತನ್ನನ್ನು ಹೊರಗಿಟ್ಟಿರುವುದಕ್ಕೆ ಆಕ್ರೋಶಗೊಂಡಿರುವ ಭಾರತದ ಜಿಮ್ ನಸ್ಟ್ ಪಟು ದೀಪಾ ಕರ್ಮಾಕರ್, ಭಾರತದ ಕ್ರೀಡಾ ಪ್ರಾಧಿಕಾರ(ಸಾಯ್) ಹಾಗೂ ಕ್ರೀಡಾ ಸಚಿವಾಲಯದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಾಯ್ ಹಾಗೂ ಸಚಿವಾಲಯದ ದಿವ್ಯ ಮೌನವು ನನ್ನನ್ನು ದುರ್ಬಲಗೊಳಿಸಿ, ನಿರುತ್ಸಾಹಗೊಳಿಸಿದೆ ಎಂದಿದ್ದಾರೆ.
2016ರ ರಿಯೋ ಒಲಿಂಪಿಕ್ಸ್ ನಲ್ಲಿ ನಾಲ್ಕನೇ ಸ್ಥಾನ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದ ಕರ್ಮಾಕರ್ ಇತ್ತೀಚೆಗೆ ಏಶ್ಯನ್ ಗೇಮ್ಸ್ ಟ್ರಯಲ್ಸ್ ನಲ್ಲಿ ಜಿಮ್ ನಸ್ಟ್ ಸ್ಪರ್ಧೆಯಲ್ಲಿ ಅಗ್ರಸ್ಥಾನದಲ್ಲಿದ್ದರು. ಆದರೆ ಕಳೆದ 12 ತಿಂಗಳಲ್ಲಿ ಅಗ್ರ-8 ಸ್ಥಾನ ಪಡೆಯಲು ಅಗತ್ಯವಿರುವ ಮಾನದಂಡವನ್ನು ಪೂರೈಸದ ಕಾರಣ ದೀಪಾರನ್ನು ಭಾರತೀಯ ತಂಡದಿಂದ ಹೊರಗಿಡಲಾಗಿತ್ತು.
2 ದಿನಗಳ ಹಿಂದೆ ದೀಪಾ ಅವರ ಕೋಚ್ ಬಿಶ್ವೇಶರ ನಂದಿ ಅವರು ಸಾಯ್ ವಿರುದ್ದ ವಾಗ್ದಾಳಿ ನಡೆಸಿದ ನಂತರ ಕರ್ಮಾಕರ್ ಸಾಮಾಜಿಕ ಜಾಲತಾಣದಲ್ಲಿ ತನ್ನ ಕೋಪ ಹಾಗೂ ಅಸಹಾಯಕತೆ ವ್ಯಕ್ತಪಡಿಸಿದರು.
ಈ ಸ್ವಾತಂತ್ರ ದಿನದಂದು ಇತ್ತೀಚೆಗಿನ ಘಟನೆಗಳನ್ನು ಚರ್ಚಿಸಲು ನನ್ನ ವಾಕ್ ಸ್ವಾತಂತ್ರವನ್ನು ಬಳಸುತ್ತಿದ್ದೇನೆ. ಈ ಬೆಳವಣಿಗೆಯು ನನ್ನನ್ನು ಕುಗ್ಗಿಸುವ ಹಾಗೂ ನಿರುತ್ಸಾಹಗೊಳಿಸಿದೆ ಎಂದು ಸಾಬೀತಾಗಿದೆ.ಏಶ್ಯನ್ ಗೇಮ್ಸ್-2023 ನಾನು ಕಳೆದ 2 ವರ್ಷಗಳಿಂದ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಈವೆಂಟ್ ಆಗಿತ್ತು ಎಂದು ಎಕ್ಸ್ ನಲ್ಲಿ ಕರ್ಮಾಕರ್ ಬರೆದಿದ್ದಾರೆ.
ಕಳೆದ 12 ತಿಂಗಳ ಅವಧಿಯಲ್ಲಿ ವೈಯಕ್ತಿಕ ಈವೆಂಟ್ ಗಳಲ್ಲಿ ಕ್ರೀಡಾಪಟುಗಳ ಪ್ರದರ್ಶನವು 2018ರ ಏಶ್ಯನ್ ಗೇಮ್ಸ್ ನಲ್ಲಿ 8 ಸ್ಥಾನ ಪಡೆದಿರುವವರು ಸಾಧಿಸಿದ ಪ್ರದರ್ಶನಕ್ಕಿಂತ ಕೆಳಗಿಳಿಯಬಾರದು ಎಂದು ಸರಕಾರದ ಮಾನದಂಡಗಳು ಹೇಳುತ್ತಿವೆ.
ರಾಷ್ಟ್ರೀಯ ಟ್ರಯಲ್ಸ್ ನಲ್ಲಿ ಅಗ್ರಸ್ಥಾನದಲ್ಲಿದ್ದರೂ ಇಂಡಿಯಾ ಸ್ಪೋರ್ಟ್ಸ್ ಆಯ್ಕೆಯ ಮಾನದಂಡಗಳನ್ನು ಪೂರೈಸಿದ್ದರೂ, 19ನೇ ಆವೃತ್ತಿಯ ಏಶ್ಯನ್ ಗೇಮ್ಸ್ನಲ್ಲಿ ಭಾಗವಹಿಸುವ ಅವಕಾಶದಿಂದ ನಾನು ವಂಚಿತಳಾಗಿರುವುದು ನನಗೆ ಅಚ್ಚರಿ ತಂದಿದೆ ಎಂದು ದೀಪಾ ಹೇಳಿದ್ದಾರೆ.
ಈ ನಿರ್ಧಾರದ ಹಿಂದಿನ ಕಾರಣ ನನಗೆ ತಿಳಿಯದಿರುವುದು ಬೇಸರದ ವಿಚಾರ. ನನ್ನೊಂದಿಗೆ ಅಧಿಕೃತವಾಗಿ ಯಾರೂ ಮಾತನಾಡಿಲ್ಲ. ನಾನು ಹಾಗೂ ನನ್ನ ಸಹ ಜಿಮ್ನಾಸ್ಟ್ ಪಟು ಸುದ್ದಿಯನ್ನು ಓದಿ ಗೇಮ್ಸ್ನಿಂದ ಹೊರಗಿಟ್ಟಿರುವ ವಿಚಾರ ತಿಳಿದುಕೊಂಡಿದ್ದೇವೆ. ಅರ್ಹತೆ ಪಡೆಯಲು ಏನು ಮಾಡಬೇಕೆಂದು ನನಗೆ ಗೊತ್ತಿಲ್ಲ ಎಂದರು.
ಪ್ರಮುಖ ಗೇಮ್ಸ್ ಗಳಿಗೆ ತಯಾರಿ ಮಾಡುವ ಕಠಿಣ ಪರಿಶ್ರಮ ಹಾಗೂ ತ್ಯಾಗವನ್ನು ವಿರಳವಾಗಿ ಪ್ರಶಂಸಿಸಲಾಗುತ್ತದೆ. ಅದರ ಬದಲಿಗೆ ಮೀಡಿಯಾ, ಸಾಯ್ ಹಾಗೂ ಇಂಡಿಯಾ ಸ್ಪೋರ್ಟ್ಸ್ನಿಂದ ಅನಿಶ್ಚಿತತೆ ಹಾಗೂ ಕಿವುಡು ಮೌನವನ್ನು ಎದುರಿಸುತ್ತಿದ್ದೇವೆ. ಆಯ್ಕೆಯ ಮಾನದಂಡಗಳನ್ನು ಎಲ್ಲಾ ಕ್ರೀಡೆಗಳಲ್ಲಿ ನ್ಯಾಯಯುತವಾಗಿ ಹಾಗೂ ಸ್ಥಿರವಾಗಿ ಅನ್ವಯಿಸಬೇಕೆಂದು ನಾನು ಕೇಳುತ್ತೇನೆ. ನನ್ನ ತರಬೇತಿಯನ್ನು ಮುಂದುವರಿಸಲು ನನ್ನ ದೇಶಕ್ಕೆ ನಾನು ಋಣಿಯಾಗಿದ್ದೇನೆ ಹಾಗೂ ಮುಂದಿನ ತಿಂಗಳು ಏಶ್ಯನ್ ಗೇಮ್ಸ್ ನಲ್ಲಿ ಭಾಗವಹಿಸುತ್ತೇನೆ ಎಂಬ ವಿಶ್ವಾಸ ನನಗೆ ಈಗಲೂ ಇದೆ ಎಂದು ದೀಪಾ ಹೇಳಿದ್ದಾರೆ.