ಫಿಡೆ ಗ್ರಾಂಡ್ ಸ್ವಿಸ್: ಮುಕ್ತ ವಿಭಾಗದಲ್ಲಿ ಚೊಚ್ಚಲ ಜಯ ಗಳಿಸಿದ ದಿವ್ಯಾ ದೇಶಮುಖ್

ದಿವ್ಯಾ ದೇಶಮುಖ್ | PC : @OnTheQueenside
ಹೊಸದಿಲ್ಲಿ, ಸೆ. 8: ಉಝ್ಬೆಕಿಸ್ತಾನದ ಸಮರ್ಕಂಡ್ ನಲ್ಲಿ ನಡೆಯುತ್ತಿರುವ ಗ್ರಾಂಡ್ ಸ್ವಿಸ್ ಚೆಸ್ ಪಂದ್ಯಾವಳಿಯಲ್ಲಿ ಭಾರತದ ದಿವ್ಯಾ ದೇಶಮುಖ್ ರವಿವಾರ ಈಜಿಪ್ಟ್ ನ ಬಾಸಿಮ್ ಅಮೀನ್ ರನ್ನು ಸೋಲಿಸಿದ್ದಾರೆ.
ಇದು ಪಂದ್ಯಾವಳಿಯೊಂದರ ಮುಕ್ತ ವಿಭಾಗದಲ್ಲಿ 19 ವರ್ಷದ ನಾಗಪುರದ ಆಟಗಾರ್ತಿಯ ಚೊಚ್ಚಲ ಗೆಲುವಾಗಿದೆ.
2478 ರೇಟಿಂಗ್ ನ ದಿವ್ಯಾ ಆಫ್ರಿಕದ ನಂಬರ್ ವನ್ ಗ್ರ್ಯಾಂಡ್ಮಾಸ್ಟರ್, 2636 ರೇಟಿಂಗ್ ನ ಅಮೀನ್ರನ್ನು ಕಪ್ಪು ಕಾಯಿಗಳಲ್ಲಿ ಸೋಲಿಸಿದರು. ಈ ಮೂಲಕ ಈ ಪಂದ್ಯಾವಳಿಯಲ್ಲಿ ದಿನದ ಆಟಗಾರ್ತಿಯಾಗಿ ಹೊರಹೊಮ್ಮಿದರು.
‘‘ನಾನು ಪ್ರಸನ್ನಚಿತ್ತಳಾಗಿದ್ದೇನೆ. ನನಗೆ ಆರಂಭವು ಕೊಂಚ ಕಷ್ಟವಾಗಿತ್ತು, ಆದರೆ ಬಳಿಕ ನಾನು ಚೇತರಿಸಿಕೊಂಡೆ. ಅವರು ಖಂಡಿತವಾಗಿಯೂ ನನ್ನ ಮೇಲೆ ತುಂಬಾ ಒತ್ತಡ ಹೇರಿದರು. ಅವರು ಆಫ್ರಿಕದ ಶ್ರೇಷ್ಠ ಹಾಗೂ ಬಲಿಷ್ಠ ಆಟಗಾರ್ತಿಯಾಗಿದ್ದಾರೆ. ಹಾಗಾಗಿ, ಅದು ನನಗೆ ಕಠಿಣ ಪಂದ್ಯವಾಗಿತ್ತು’’ ಎಂದು ಪಂದ್ಯದ ಬಳಿಕ ಮಾತನಾಡಿದ ದಿವ್ಯಾ ಹೇಳಿದರು.
ಈಗಷ್ಟೇ ಹದಿಹರೆಯದಿಂದ ಹೊರಬಂದಿರುವ ಅವರು ಈಗಾಗಲೇ ಒಲಿಂಪಿಯಾಡ್ ಚಿನ್ನಗಳು, ವಿಶ್ವ ಜೂನಿಯರ್ ಬಾಲಕಿಯರ ಪ್ರಶಸ್ತಿ, ಏಶ್ಯನ್ ಚಾಂಪಿಯನ್ ಶಿಪ್ ಪ್ರಶಸ್ತಿ ಮತ್ತು ಇತ್ತೀಚೆಗೆ ಪ್ರತಿಷ್ಠಿತ ಮಹಿಳಾ ವಿಶ್ವಕಪ್ ಕೂಡ ಗೆದ್ದಿದ್ದಾರೆ.
ಅವರು ಈ ಪಂದ್ಯಾವಳಿಯಲ್ಲಿ ಮಹಿಳಾ ಗ್ರಾಂಡ್ ಸ್ವಿಸ್ ನಲ್ಲಿ ಆಡದೆ, ಜಗತ್ತಿನ ಶ್ರೇಷ್ಠರ ವಿರುದ್ಧ ಮುಕ್ತ ವಿಭಾಗದಲ್ಲಿ ಆಡಲು ನಿರ್ಧರಿಸಿರುವುದನ್ನು ಸ್ಮರಿಸಬಹುದಾಗಿದೆ.







