ನಿವೃತ್ತಿಯ ಊಹಾಪೋಹಕ್ಕೆ ತೆರೆ ಎಳೆದ ಜೊಕೊವಿಕ್

ನೊವಾಕ್ ಜೊಕೊವಿಕ್ | PC : PTI
ನ್ಯೂಯಾರ್ಕ್. ಸೆ.6: ಕಾರ್ಲೊಸ್ ಅಲ್ಕರಾಝ್ ವಿರುದ್ಧ ಯು.ಎಸ್. ಓಪನ್ ಸೆಮಿ ಫೈನಲ್ ಪಂದ್ಯದಲ್ಲಿ ನೇರ ಸೆಟ್ಗಳ ಅಂತರದಿಂದ ಸೋತಿರುವ ನೊವಾಕ್ ಜೊಕೊವಿಕ್ ನಿವೃತ್ತಿಯ ಕುರಿತ ಊಹಾಪೋಹಕ್ಕೆ ತೆರೆ ಎಳೆದರು. ಇನ್ನಷ್ಟು ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳನ್ನು ಗೆಲ್ಲಲು ತನ್ನ ಹೋರಾಟವನ್ನು ಮುಂದುವರಿಸಲು ಬದ್ಧನಾಗಿದ್ದೇನೆ ಎಂದಿದ್ದಾರೆ.
38ರ ಹರೆಯದ ಜೊಕೊವಿಕ್ ಅವರ ದಾಖಲೆಯ 25ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆಲ್ಲುವ ಕನಸಿಗೆ ಸ್ಪೇನ್ನ ಯುವ ಆಟಗಾರ ಅಲ್ಕರಾಝ್ ತಣ್ಣೀರೆರಚಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಎಲ್ಲ 4 ಗ್ರ್ಯಾನ್ಸ್ಲಾಮ್ ಟೂರ್ನಮೆಂಟ್ಗಳಲ್ಲಿ ಸ್ಪರ್ಧಿಸುವ ತನ್ನ ದೃಢ ಸಂಕಲ್ಪವನ್ನು ವ್ಯಕ್ತಪಡಿಸಿರುವ ಜೊಕೊವಿಕ್, ಟೆನಿಸ್ನಲ್ಲಿ ಅದರ ಮಹತ್ವವನ್ನು ಒತ್ತಿ ಹೇಳಿದರು.
‘‘ನಾನು ಗ್ರ್ಯಾನ್ಸ್ಲಾಮ್ ಟೂರ್ನಿಗಳನ್ನು ಬಿಟ್ಟುಕೊಡುವುದಿಲ್ಲ. ನಾನು ಹೋರಾಟವನ್ನು ಮುಂದುವರಿಸುತ್ತೇನೆ. ಮುಂದಿನ ವರ್ಷ ನಾನು ಇನ್ನೂ ಪೂರ್ಣ ಗ್ರ್ಯಾನ್ಸ್ಲಾಮ್ ಋತುವನ್ನು ಆಡಲು ಬಯಸುತ್ತೇನೆ. ಗ್ರ್ಯಾನ್ಸ್ಲಾಮ್ ಟೂರ್ನಿಗಳು ಇತರ ಪಂದ್ಯಾವಳಿಗಳಿಗಿಂತ ಭಿನ್ನವಾಗಿದೆ. ಅವುಗಳು ನಮ್ಮ ಕ್ರೀಡೆಯ ಆಧಾರಸ್ತಂಭಗಳು’’ ಎಂದು ಜೊಕೊವಿಕ್ ತಿಳಿಸಿದರು.





