ಅಡಿಲೇಡ್ ಇಂಟರ್ನ್ಯಾಶನಲ್ ಟೂರ್ನಿಯಲ್ಲಿ ಜೊಕೊವಿಕ್ ಸ್ಪರ್ಧೆ

Photo: PTI
ಮೆಲ್ಬರ್ನ್, ಡಿ.16: ಸರ್ಬಿಯದ ದಿಗ್ಗಜ ಆಟಗಾರ ನೊವಾಕ್ ಜೊಕೊವಿಕ್ 11ನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಹಾಗೂ 25ನೇ ಗ್ರ್ಯಾನ್ಸ್ಲಾಮ್ಕಿರೀಟವನ್ನು ಧರಿಸುವ ನಿಟ್ಟಿನಲ್ಲಿ ಪೂರ್ವ ತಯಾರಿ ನಡೆಸಲು ಅಡಿಲೇಡ್ ಇಂಟರ್ನ್ಯಾಶನಲ್ ಟೂರ್ನಿಯಲ್ಲಿ ಆಡಲಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
38ರ ಹರೆಯದ ವಿಶ್ವದ ನಂ.4ನೇ ಆಟಗಾರ ಜೊಕೊವಿಕ್ ಈ ಹಿಂದೆ ಎರಡು ಬಾರಿ ಅಡಿಲೇಡ್ನಲ್ಲಿ ಸ್ಪರ್ಧಿಸಿದ್ದು, 2007 ಹಾಗೂ 2023 ಎರಡು ಬಾರಿಯೂ ಪ್ರಶಸ್ತಿಗಳನ್ನು ಜಯಿಸಿದ್ದರು.
ಮೆಲ್ಬರ್ನ್ ಪಾರ್ಕ್ನಲ್ಲಿ ಜನವರಿ 18ರಿಂದ ಆರಂಭವಾಗಲಿರುವ ಮೊದಲ ಗ್ರ್ಯಾನ್ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್ಗಿಂತ ಮೊದಲು ಜನವರಿ 12ರಿಂದ 17ರ ತನಕ ಎಟಿಪಿ-ಡಬ್ಲ್ಯುಟಿಎ ಪಂದ್ಯಾವಳಿಯಲ್ಲಿ ಆಡಲು ಜೊಕೊವಿಕ್ ನಗರಕ್ಕೆ ಆಗಮಿಸಲಿದ್ದಾರೆ.
ಜೊಕೊವಿಕ್ 2023ರಲ್ಲಿ ಕೊನೆಯ ಬಾರಿ ಪ್ರಮುಖ ಟೂರ್ನಿಯನ್ನು ಗೆದ್ದಿದ್ದರು. ಈ ವರ್ಷ ಜಿನೇವಾ ಹಾಗೂ ಅಥೆನ್ಸ್ನಲ್ಲಿ ಪ್ರಶಸ್ತಿ ಜಯಿಸಿದ್ದರು.
ಅಡಿಲೇಡ್ನಲ್ಲಿ ಜಾಕ್ ಡ್ರೇಪರ್, ಫೊನ್ಸಿಕಾ, ಟಾಮಿ ಪೌಲ್ ಹಾಗೂ ಸ್ಟೆಫನೊಸ್ ಸಿಟ್ಸಿಪಾಸ್ ಸ್ಪರ್ಧಿಸಲಿದ್ದಾರೆ.
ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಮ್ಯಾಡಿಸನ್ ಕೀಸ್ ಅವರು ಮಹಿಳೆಯರ ಸಿಂಗಲ್ಸ್ ಸ್ಪರ್ಧೆಯನ್ನು ಮುನ್ನಡೆಸಲಿದ್ದಾರೆ.
ಜೆಸ್ಸಿಕಾ ಪೆಗುಲಾ, ಮಿರ್ರಾ ಆಂಡ್ರೀವಾ ಹಾಗೂ ಎಕಟೆರಿನಾ ಅಲೆಕ್ಸಾಂಡ್ರೋವಾ ಸಹಿತ 10 ಆಟಗಾರ್ತಿಯರು ಕಣದಲ್ಲಿದ್ದಾರೆ.







