ಸಚಿನ್ ಜತೆ ಹೋಲಿಸಬೇಡಿ: ಸೂರ್ಯವಂಶಿ ಬಗ್ಗೆ ದಿನೇಶ್ ಕಾರ್ತಿಕ್ ಎಚ್ಚರಿಕೆ

ವೈಭವ್ ಸೂರ್ಯವಂಶಿ Photo credit: X/@IPL
ಹೊಸದಿಲ್ಲಿ: ರಾಜಸ್ಥಾನ ರಾಯಲ್ಸ್ ತಂಡದ ಯುವಪ್ರತಿಭೆ ವೈಭವ್ ಸೂರ್ಯವಂಶಿಯವರನ್ನು ಭಾರತೀಯ ಕ್ರಿಕೆಟ್ನ ದಂತಕಥೆ ಎನಿಸಿದ ಸಚಿನ್ ತೆಂಡೂಲ್ಕರ್ ಜತೆ ಹೋಲಿಸಬೇಡಿ; ಏಕೆಂದರೆ ಹದಿಹರೆಯದ ಆಟಗಾರ ವೃತ್ತಿಜೀವನದಲ್ಲಿ ಇನ್ನೂ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಭಾರತ ತಂಡದ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಎಚ್ಚರಿಸಿದ್ದಾರೆ.
ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಎಡಗೈ ಬ್ಯಾಟ್ಸ್ಮನ್ 13 ಪಂದ್ಯಗಳಿಂದ 579 ರನ್ ಕಲೆ ಹಾಕಿದ್ದು, 236.32 ಸ್ಟ್ರೈಕ್ ರೇಟ್ನೊಂದಿಗೆ ರನ್ ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
"ವೈಭವ್ ಸಾಧನೆ ಅತ್ಯಂತ ವಿಶೇಷ. ಆದರೆ ಅವರನ್ನು ಮುಂದಿನ ಸಚಿನ್ ತೆಂಡೂಲ್ಕರ್ ಎಂದು ಜನರು ಹಣೆಪಟ್ಟಿ ಕಟ್ಟುವುದನ್ನು ನಾನು ಇಷ್ಟಪಡುವುದಿಲ್ಲ. ಏಕೆಂದರೆ ಅವರಿಗೆ ಇನ್ನೂ ಕೇವಲ 15 ವರ್ಷ; ಏನು ಮಾಡಬೇಕೋ ಅದು ಮಾಡುತ್ತಿದ್ದಾರೆ. ಸಚಿನ್ ಸಾಧನೆ ಅದ್ಭುತ. ವೈಭವ್ ಅವರ ಸವಾಲುಗಳು ಸಂಪೂರ್ಣ ಭಿನ್ನ" ಎಂದು ವಿಶ್ಲೇಷಿಸಿದ್ದಾರೆ.
"ಸಚಿನ್ ಅವರ ಸವಾಲುಗಳು ಮೈದಾನದ ಹೊರಗೆ ಇದ್ದಿದ್ದರೆ ಮೈದಾನದ ಒಳಗೂ ಭಿನ್ನ ಇರುತ್ತಿದ್ದವು. ಆದರೆ ವೈಭವ್ ಸವಾಲುಗಳು ಖಂಡಿತವಾಗಿಯೂ ಮೈದಾನದ ಹೊರಗೆ ಹೆಚ್ಚು. ಏಕೆಂದರೆ ಅವರು ಅದ್ಭುತ ಕ್ರಿಕೆಟ್ ಕೌಶಲಗಳನ್ನು ಹೊಂದಿದ್ದಾರೆ ಹಾಗೂ ಕ್ರೀಡೆಗಿಂತ ಹೊರಗಿನದನ್ನೂ ವ್ಯವಹರಿಸುತ್ತಿದ್ದಾರೆ" ಎಂದು ಕ್ವೆಸ್ಟ್ ಟಾಕ್ ಪಾಡ್ಕಾಸ್ಟ್ನ ಸಂಚಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾಗಿ ಐಎಎನ್ಎಸ್ ವರದಿ ಮಾಡಿದೆ.
ಕಾರ್ತಿಕ್ ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಪಿಎಲ್ 2008ರಲ್ಲಿ ಆರಂಭವಾದಾಗಿನಿಂದ ಈಗ ಹೇಗೆ ಬದಲಾಗಿದೆ ಎನ್ನುವುದನ್ನೂ ವಿವರಿಸಿದ್ದಾರೆ.






