ಡಿಪಿಎಲ್ ಲೀಗ್ ಪಂದ್ಯಾಟದ ವೇಳೆ ಮೈದಾನದಲ್ಲೇ 2 ತಂಡಗಳ ನಡುವೆ ಸಂಘರ್ಷ : ಮಧ್ಯಪ್ರವೇಶಿಸಿದ ಮಹಿಳಾ ಅಂಪೈರ್!

timesofindia
ಹೊಸದಿಲ್ಲಿ: ದೆಹಲಿ ಪ್ರಿಮಿಯರ್ ಲೀಗ್ನ ವೆಸ್ಟ್ ಡೆಲ್ಲಿ ಲಯನ್ಸ್ ಮತ್ತು ಸೌತ್ ಡೆಲ್ಲಿ ಸೂಪರ್ಸ್ಟಾರ್ ತಂಡಗಳ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಮೈದಾನದಲ್ಲೇ ಪರಸ್ಪರ ಸಂಘರ್ಷಕ್ಕೆ ಇಳಿದ ಅಪರೂಪದ ಘಟನೆ ಶುಕ್ರವಾರ ನಡೆಯಿತು.
ಕೃಷ್ ಯಾದವ್ ಅವರು ಔಟ್ ಆದ ಸಂದರ್ಭದಲ್ಲಿ ಈ ಘಟನೆ ನಡೆಯಿತು. ಅಮನ್ ಭಾರ್ತಿಯವರ ಎಸೆತದಲ್ಲಿ ಲಾಂಗ್ ಆಫ್ ನಲ್ಲಿ ಸಿಕ್ಸ್ ಹೊಡೆಯುವ ಯತ್ನದಲ್ಲಿ ಬೌಂಡರಿ ಗೆರೆಯಲ್ಲಿ ಅನುಮೋಲ್ ಶರ್ಮಾ ಅವರ ಕ್ಯಾಚ್ಗೆ ಬಲಿಯಾದರು. ಈ ಸಂದರ್ಭದಲ್ಲಿ ಉಭಯ ತಂಡಗಳ ಆಟಗಾರರು ಗುಂಪು ಸೇರಿ, ಏರುದ್ವನಿಯಲ್ಲಿ ಕೂಗಾಡುತ್ತಾ ಪರಸ್ಪರ ತಳ್ಳಾಟದಲ್ಲಿ ತೊಡಗಿದ ದೃಶ್ಯ ಕಂಡುಬಂತು.
ಸೌತ್ ಡೆಲ್ಲಿಯ ಸುಮಿತ್ ಮಾಥುರ್, ಬೌಲರ್ ಅಮನ್ ಭಾರ್ತಿ ಮತ್ತು ಬ್ಯಾಟ್ಸ್ ಮನ್ ಕ್ರಿಶ್ ಯಾದವ್ ಈ ಸಂಘರ್ಷದ ಕೇಂದ್ರಬಿಂದುಗಳು. ಅಂಪೈರ್ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಮಧ್ಯಪ್ರವೇಶಿಸಿದರು. ಈ ಹಂತದಲ್ಲಿ ಇತರ ಆಟಗಾರರು ಕೂಡಾ ಸಂಘರ್ಷ ಶಮನಕ್ಕೆ ಮುಂದಾದರು. ಮೊದಲು ಬ್ಯಾಟ್ ಮಾಡಿದ ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿದ್ದರು. ಯಾದವ್ ವಿಕೆಟ್ ಪತನವಾದಾಗ ವೆಸ್ಟ್ ಡೆಲ್ಲಿ ಲಯನ್ಸ್ 118 ರನ್ ಗಳಿಸಿದ್ದರು.
ಇದಕ್ಕೂ ಮುನ್ನ ವೆಸ್ಟ್ ಡೆಲ್ಲಿ ನಾಯಕ ನಿತೀಶ್ ರಾಣಾ ಆಕರ್ಷಕ ಅರ್ಧ ಶತಕದೊಂದಿಗೆ ರನ್ ಬೆನ್ನಟ್ಟುವಲ್ಲಿ ಮುಂಚೂಣಿ ಪಾತ್ರ ವಹಿಸಿದರು. ಈ ಸಂಘರ್ಷಕ್ಕೆ ಮುನ್ನ ಅಜೇಯರಾಗಿ ಉಳಿದಿದ್ದ ರಾಣಾ ಶತಕದ ಹಾದಿಯಲ್ಲಿದ್ದರು. ಈ ಮಹತ್ವದ ಎಲಿಮಿನೇಟರ್ ಹಂತದಲ್ಲಿ ಈ ಸಂಘರ್ಷ ನಡೆದಿದ್ದು, ಲೀಗ್ ಅಧಿಕಾರಿಗಳು ಅಗತ್ಯ ಬಿದ್ದರೆ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇದಕ್ಕೂ ಮುನ್ನ ದಿಗ್ವೇಶ್ ರಾಠಿ ಮತ್ತು ನಿತೀಶ್ ರಾಣಾ ನಡುವೆಯೂ ಮಾತಿನ ಚಕಮಕಿ ನಡೆದಿತ್ತು.
17.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿದ ವೆಸ್ಟ್ ಡೆಲ್ಲಿ ಸೂಪರ್ ಸ್ಟಾರ್ ತಂಡ ಈ ಪಂದ್ಯವನ್ನು 7 ವಿಕೆಟ್ ಅಂತರದಲ್ಲಿ ಗೆದ್ದಿತು. ನಿತೀಶ್ ರಾಣಾ ಕೇವಲ 55 ಎಸೆತಗಳಲ್ಲಿ 8 ಬೌಂಡರಿ ಹಾಗೂ 15 ಸಿಕ್ಸರ್ ಒಳಗೊಂಡ 134 ರನ್ ಸಿಡಿಸಿದರು.







