ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಜೆರ್ಸಿ ಪ್ರದಾನಿಸಿದ ವಿಶ್ವಕಪ್ ವಿಜೇತ ಭಾರತ ಮಹಿಳಾ ತಂಡ

ದ್ರೌಪದಿ ಮುರ್ಮು , ಹರ್ಮನ್ ಪ್ರೀತ್ ಕೌರ್ | Photo Credit : PTI
ಹೊಸದಿಲ್ಲಿ, ನ.6: ವಿಶ್ವಕಪ್ ವಿಜೇತ ಭಾರತೀಯ ಮಹಿಳೆಯರ ಕ್ರಿಕೆಟ್ ತಂಡವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಗುರುವಾರ ರಾಷ್ಟ್ರಪತಿ ಭವನದಲ್ಲಿ ಭೇಟಿಯಾಯಿತು. ಈ ಭೇಟಿಯ ವೇಳೆ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರು ಎಲ್ಲ ಆಟಗಾರ್ತಿಯರ ಹಸ್ತಾಕ್ಷರವಿರುವ ಟೀಮ್ ಜೆರ್ಸಿಯನ್ನು ರಾಷ್ಟ್ರಪತಿಗೆ ನೀಡಿದರು.
ನವಿ ಮುಂಬೈನಲ್ಲಿ ರವಿವಾರ ನಡೆದ 50 ಓವರ್ ವಿಶ್ವಕಪ್ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ 52 ರನ್ ಗಳ ಅಂತರದಿಂದ ಜಯಶಾಲಿಯಾಗಿರುವ ಭಾರತೀಯ ತಂಡವು ಜಾಗತಿಕ ಮಟ್ಟದಲ್ಲಿ ಮೊತ್ತ ಮೊದಲ ಬಾರಿ ಪ್ರಶಸ್ತಿ ಗೆದ್ದುಕೊಂಡಿತು.
ಈ ಸಾಧನೆಯು ಭಾರತದಲ್ಲಿ ಕ್ರಿಕೆಟ್ ಗೆ ಒಂದು ಐತಿಹಾಸಿಕ ಕ್ಷಣಕ್ಕೆ ಕಾರಣವಾಗಿದೆ.
ತಂಡದ ಐತಿಹಾಸಿಕ ಸಾಧನೆಯನ್ನು ಶ್ಲಾಘಿಸಿದ ರಾಷ್ಟ್ರಪತಿ ಮುರ್ಮು, ಯುವ ಜನರಿಗೆ ಸ್ಫೂರ್ತಿ ನೀಡುವಲ್ಲಿ ಅವರ ಪಾತ್ರವನ್ನು ಎತ್ತಿ ತೋರಿಸಿದರು.
‘‘2025ರ ಆವೃತ್ತಿಯ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ವಿಜೇತ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸದಸ್ಯರು ರಾಷ್ಟ್ರಪತಿ ಭವನದಲ್ಲಿ ನನ್ನನ್ನು ಭೇಟಿ ಮಾಡಿದರು. ನಾನು ಇಡೀ ತಂಡವನ್ನು ಅಭಿನಂದಿಸಿದೆ. ನೀವು ಇತಿಹಾಸವನ್ನು ಸೃಷ್ಟಿಸಿದ್ದೀರಿ, ಯುವ ಪೀಳಿಗೆಗೆ ಮಾದರಿಯಾಗಿದ್ದೀರಿ, ಈ ತಂಡವು ಭಾರತವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಕ್ಸ್ನಲ್ಲಿ ಬರೆದಿದ್ದಾರೆ.
ನಾಯಕಿ ಹರ್ಮನ್ ಪ್ರೀತ್ ಕೌರ್ ಅವರು ರಾಷ್ಟ್ರಪತಿ ಮುರ್ಮು ಅವರ ಕೈಗೆ ವಿಶ್ವಕಪ್ ಟ್ರೋಫಿಯನ್ನು ನೀಡಿದರು.
ಭಾರತದ ಮಹಿಳಾ ಕ್ರಿಕೆಟ್ ತಂಡವು ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು.
ಭಾರತ ಮಹಿಳಾ ತಂಡದ ನಾಯಕಿ ಹರ್ಮನ್ ಪ್ರೀತ್ ಅವರು 2017ರಲ್ಲಿ ಮೋದಿ ಅವರನ್ನು ಭೇಟಿಯಾಗಿದ್ದನ್ನು ನೆನಪಿಸಿಕೊಂಡರು. ಅಗ ಟೀಮ್ಇಂಡಿಯಾವು ರನ್ನರ್ ಅಪ್ ಆಗಿತ್ತು. ಇದೀಗ ಚಾಂಪಿಯನ್ಸ್ ಆಗಿ ಮರಳಿದ್ದಕ್ಕೆ ಪ್ರಧಾನಿ ಹೆಮ್ಮೆ ವ್ಯಕ್ತಪಡಿಸಿದರು.







