ದುಬೈ ಟೆನಿಸ್ ಚಾಂಪಿಯನ್ ಶಿಪ್: ಇಗಾ ಸ್ವಿಯಾಟೆಕ್ ಸೆಮಿಫೈನಲ್ ಗೆ

ಇಗಾ ಸ್ವಿಯಾಟೆಕ್ | Photo: PTI
ದುಬೈ : ದುಬೈ ಟೆನಿಸ್ ಚಾಂಪಿಯನ್ ಶಿಪ್ ನಲ್ಲಿ, ಗುರುವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಪೋಲ್ಯಾಂಡ್ ದೇಶದ ಇಗಾ ಸ್ವಿಯಾಟೆಕ್ ಚೀನಾದ ಝೆಂಗ್ ಕ್ವಿನ್ವೆನ್ ರನ್ನು 6-3, 6-2 ನೇರ ಸೆಟ್ ಗಳಿಂದ ಸೋಲಿಸಿದ್ದಾರೆ.
ವಿಶ್ವದ ನಂಬರ್ ವನ್ ಆಟಗಾರ್ತಿ ಸ್ವಿಯಾಟೆಕ್ ಕಳೆದ ಶನಿವಾರ ಖತರ್ ನ ದೋಹಾದಲ್ಲಿ ಸತತ ಮೂರನೇ ಬಾರಿ ಪ್ರಶಸ್ತಿ ಎತ್ತಿದ್ದಾರೆ. ಅವರು ತನ್ನ ಅಜೇಯ ಯಾತ್ರೆಯನ್ನು ಏಳು ಪಂದ್ಯಗಳಿಗೆ ವಿಸ್ತರಿಸಿದ್ದಾರೆ. ಈ ಮೂಲಕ, 2007ರ ಬಳಿಕ ಒಂದೇ ಋತುವಿನಲ್ಲಿ ದೋಹಾ ಮತ್ತು ದುಬೈ ಎರಡೂ ಪಂದ್ಯಾವಳಿಗಳಲ್ಲಿ ಟ್ರೋಫಿಗಳನ್ನು ಎತ್ತಿದ ಮೊದಲ ಹಾಗೂ ಒಟ್ಟಾರೆ ಮೂರನೇ ಮಹಿಳಾ ಟೆನಿಸ್ಪಟು ಆಗುವ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ.
“ನಾನು ಚೆನ್ನಾಗಿ ಆಡಿದ್ದೇನೆ ಎನ್ನುವ ತೃಪ್ತಿಯಿದೆ. ನನ್ನ ತಂತ್ರಗಾರಿಕೆಗಳ ಪ್ರಕಾರವೇ ಆಡಿದೆ. ನಾನಿಲ್ಲಿ ಖಂಡಿತವಾಗಿಯೂ ದಿನದಿಂದ ದಿನಕ್ಕೆ ಉತ್ತಮಗೊಳ್ಳುತ್ತಿದ್ದೇನೆ'' ಎಂದು ದುಬೈನಲ್ಲಿ ಕಳೆದ ವರ್ಷದ ರನ್ನರ್-ಅಪ್ ಆಗಿರುವ ಸ್ವಿಯಾಟೆಕ್ ಹೇಳಿದರು.
ಸೆಮಿಫೈನಲ್ನಲ್ಲಿ ಅವರು ರಶ್ಯದ ಆನಾ ಕಲಿನ್ಸ್ಕಯರನ್ನು ಎದುರಿಸಲಿದ್ದಾರೆ. ಕಲಿನ್ ಸ್ಕಯ ಇನ್ನೊಂದು ಕ್ವಾರ್ಟರ್ ಫೈನಲ್ನಲ್ಲಿ ಯುಎಸ್ ಓಪನ್ ಚಾಂಪಿಯನ್ ಕೋಕೊ ಗೌಫ್ರನ್ನು 2-6, 6-4, 6-2 ಸೆಟ್ಗಳಿಂದ ಪರಾಭವಗೊಳಿಸಿದ್ದಾರೆ. ಇದು ಅವರಿಬ್ಬರ ಮೊದಲ ಮುಖಾಮುಖಿಯಾಗಲಿದೆ.







