ದುಬೈ ಟೆನಿಸ್ ಚಾಂಪಿಯನ್ ಶಿಪ್: ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ ಕ್ವಾರ್ಟರ್ ಫೈನಲ್ ಗೆ

ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ | Photo: PTI
ದುಬೈ : ಅಗ್ರ ಶ್ರೇಯಾಂಕದ ರೋಹನ್ ಬೋಪಣ್ಣ ಹಾಗೂ ಅವರ ಆಸ್ಟ್ರೇಲಿಯದ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ದುಬೈ ಡ್ಯೂಟಿ ಫ್ರೀ ಟೆನಿಸ್ ಚಾಂಪಿಯನ್ ಶಿಪ್ ನಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಮಂಗಳವಾರ ರಾತ್ರಿ 1 ಗಂಟೆ, 49 ನಿಮಿಷಗಳ ಕಾಲ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಬೋಪಣ್ಣ ಹಾಗೂ ಎಬ್ಡೆನ್ ಟ್ಯುನಿಶಿಯ-ಪಾಕಿಸ್ತಾನದ ಜೋಡಿ ಸ್ಕಂದರ್ ಮಂಜೂರಿ ಹಾಗೂ ಐಸಾಮ್ ಉಲ್-ಹಕ್ ಖುರೇಷಿ ವಿರುದ್ಧ 7-6(4), 7-6(5) ಅಂತರದಿಂದ ಸೋಲಿಸಿದರು.
ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ನಲ್ಲಿ ಪ್ರಶಸ್ತಿ ಜಯಿಸಿದ ನಂತರ ಮೊದಲ ಬಾರಿ ಆಡುತ್ತಿರುವ ಬೋಪಣ್ಣ ಹಾಗೂ ಎಬ್ಡೆನ್ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಉರುಗ್ವೆಯ ಏರಿಯಲ್ ಬೆಹರ್ ಹಾಗೂ ಝೆಕ್ ಗಣರಾಜ್ಯದ ಆಡಮ್ ಪಾವ್ಲಾಸೆಕ್ರನ್ನು ಎದುರಿಸಲಿದ್ದಾರೆ.
ಮತ್ತೊಂದು ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಭಾರತದ ಯೂಕಿ ಭಾಂಬ್ರಿ ಹಾಗೂ ಅವರ ಡಚ್ ಜೊತೆಗಾರ ರಾಬಿನ್ ಹಾಸೆ ಫ್ರಾನ್ಸ್ನ ಆಡ್ರಿಯನ್ ಮನ್ನಾರಿನೊ ಹಾಗೂ ಕಝಕ್ಸ್ತಾನದ ಅಲೆಕ್ಸಾಂಡರ್ ಬಬ್ಲಿಕ್ರನ್ನು 6-7(6), 6-3, 10-8 ಸೆಟ್ಗಳ ಅಂತರದಿಂದ ಮಣಿಸಿದರು. ಈ ಮೂಲಕ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದರು.
ಇದೇ ವೇಳೆ ಸುಮಿತ್ ನಾಗಲ್ ಅಂತಿಮ-32ರ ಸುತ್ತಿನಲ್ಲಿ ಸೋತ ಹಿನ್ನೆಲೆಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯವಾಗಿದೆ.
ನಾಗಲ್ ಅವರು ಇಟಲಿಯ ಲೊರೆಂರೊ ಸೊನೆಗೊ ವಿರುದ್ಧ 4-6, 7-5, 1-6 ಸೆಟ್ಗಳ ಅಂತರದಿಂದ ಸೋತಿದ್ದಾರೆ.







