ದುಬೈ ಟೆನಿಸ್ ಚಾಂಪಿಯನ್ ಶಿಪ್: ಯೂಕಿ ಭಾಂಬ್ರಿ-ರಾಬಿನ್ ಹಾಸೆ ಸೆಮಿ ಫೈನಲ್ ಗೆ

ಯೂಕಿ ಭಾಂಬ್ರಿ , ರಾಬಿನ್ ಹಾಸೆ | PHOTO : X \ @SportsArena1234
ದುಬೈ: ಕ್ವಾಲಿಫೈಯರ್ ಗಳಾದ ಯೂಕಿ ಭಾಂಬ್ರಿ ಹಾಗೂ ರಾಬಿನ್ ಹಾಸೆ ದುಬೈ ಡ್ಯೂಟಿ ಫ್ರಿ ಟೆನಿಸ್ ಚಾಂಪಿಯನ್ ಶಿಪ್ ನಲ್ಲಿ ಸೆಮಿ ಫೈನಲ್ ಗೆ ತಲುಪಿದ್ದಾರೆ.
ಭಾರತದ ಭಾಂಬ್ರಿ ಹಾಗೂ ಡಚ್ ಹಾಸೆ ಬ್ರಿಟನ್ ನ ಜಮ್ಮಿ ಮರ್ರೆ ಹಾಗೂ ಕಿವೀಸ್ ನ ಮೈಕಲ್ ವೀನಸ್ ವಿರುದ್ಧ 6-4, 7-6(1) ಸೆಟ್ ಗಳ ಅಂತರದಿಂದ ಜಯ ಸಾಧಿಸಿದರು.
31ರ ಹರೆಯದ ಭಾಂಬ್ರಿ ಎಟಿಪಿ 500 ಸಿರೀಸ್ ನಲ್ಲಿ ಇದೇ ಮೊದಲ ಬಾರಿ ಸೆಮಿ ಫೈನಲ್ ಗೆ ತಲುಪಿದ್ದಾರೆ. ಆಸ್ಟ್ರೇಲಿಯನ್ ಓಪನ್ ಹಾಗೂ ಖತರ್ ಓಪನ್ನಲ್ಲಿ ಸತ್ವ ಪರೀಕ್ಷೆ ಎದುರಿಸಿದ ನಂತರ ಭಾಂಬ್ರಿ ಗಮನಾರ್ಹ ಫಲಿತಾಂಶ ದಾಖಲಿಸಿದ್ದಾರೆ.
ಭಾಂಬ್ರಿ ಹಾಗೂ ಹಾಸೆ ಮುಂದಿನ ಸುತ್ತಿನಲ್ಲಿ ಎರಡನೇ ಶ್ರೇಯಾಂಕದ ಕ್ರೊಯೇಶಿಯದ ಇವಾನ್ ಡೊಡಿಗ್ ಹಾಗೂ ಅಮೆರಿಕದ ಆಸ್ಟಿನ್ ಕ್ರಾಜಿಸೆಕ್ರನ್ನು ಎದುರಿಸಲಿದ್ದಾರೆ.
ಬೋಪಣ್ಣ-ಎಬ್ಡೆನ್ ಅಭಿಯಾನ ಅಂತ್ಯ
ಇದೇ ವೇಳೆ ಅಗ್ರ ಶ್ರೇಯಾಂಕದ ರೋಹನ್ ಬೋಪಣ್ಣ ಹಾಗೂ ಮ್ಯಾಥ್ಯೂ ಎಬ್ಡೆನ್ ದುಬೈ ಚಾಂಪಿಯನ್ ಶಿಪ್ ನಲ್ಲಿ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಎಡವಿದ್ದಾರೆ.
72 ನಿಮಿಷಗಳ ಕಾಲ ನಡೆದ ಪುರುಷರ ಡಬಲ್ಸ್ ನ ಅಂತಿಮ-8ರ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.1 ಜೋಡಿ ಬೋಪಣ್ಣ ಹಾಗೂ ಎಬ್ಡೆನ್ ಉರುಗ್ವೆಯ ಅರಿಯೆಲ್ ಬೆಹಾರ್ ಹಾಗೂ ಝೆಕ್ ನ ಆಡಮ್ ಪಾವ್ಲಾಸೆಕ್ ಎದುರು 6-3, 3-6, 8-10 ಅಂತರದಿಂದ ಸೋತಿದ್ದಾರೆ.
ಬೋಪಣ್ಣ ಹಾಗೂ ಎಬ್ಡೆನ್ ಉತ್ತಮ ಆರಂಭ ಪಡೆದಿದ್ದರು. ಆದರೆ ಎರಡನೇ ಸೆಟ್ ನಲ್ಲಿ ಎಡವಿದರು. ಅಂತಿಮ ಸೆಟ್ ನ ಸೂಪರ್ ಟೈ-ಬ್ರೇಕ್ ನಲ್ಲಿ ಕೊನೆಯ 3 ಅಂಕ ಗಳಿಸಿದ ಬೆಹಾರ್ ಹಾಗೂ ಪಾವ್ಲಾಸೆಕ್ ಅಂತಿಮ-4ರ ಸುತ್ತು ಪ್ರವೇಶಿಸಿದರು.







