ದುಲೀಪ್ ಟ್ರೋಫಿ ಫೈನಲ್ | ಯಶ್ ರಾಥೋಡ್ ಭವ್ಯ ಬ್ಯಾಟಿಂಗ್ : ವಿಜಯದತ್ತ ಕೇಂದ್ರ ವಲಯ ದಾಪುಗಾಲು

ಯಶ್ ರಾಥೋಡ್ | PHOTO : X/@BCCIdomestic
ಬೆಂಗಳೂರು, ಸೆ.13: ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಪಂದ್ಯಾವಳಿಯ ಫೈನಲ್ನ ಮೂರನೇ ದಿನವಾದ ಶನಿವಾರ ಕೇಂದ್ರ ವಲಯವು ವಿಜಯದತ್ತ ದಾಪುಗಾಲಿಟ್ಟಿದೆ. ಅದು ದಕ್ಷಿಣ ವಲಯದ ವಿರುದ್ಧದ ತನ್ನ ಮೊದಲ ಇನಿಂಗ್ಸ್ನಲ್ಲಿ ಯಶ್ ರಾಥೋಡ್ರ 194 ರನ್ಗಳ ನೆರವಿನಿಂದ ಬೃಹತ್ 511 ರನ್ಗಳನ್ನು ಕಲೆ ಹಾಕಿದೆ.
ದಕ್ಷಿಣ ವಲಯವು ಮೊದಲ ಇನಿಂಗ್ಸ್ನಲ್ಲಿ 149 ರನ್ ಗಳಿಸಿದರೆ, ಎರಡನೇ ಇನಿಂಗ್ಸ್ನಲ್ಲಿ ಮೂರನೇ ದಿನದಾಟದ ಕೊನೆಯ ವೇಳೆಗೆ 2 ವಿಕೆಟ್ಗಳ ನಷ್ಟಕ್ಕೆ 129 ರನ್ಗಳನ್ನು ಗಳಿಸಿದೆ. ಅದು ಕೇಂದ್ರ ವಲಯದ ಮೊದಲ ಇನಿಂಗ್ಸ್ ಮೊತ್ತಕ್ಕಿಂತ ಈಗಲೂ 233 ರನ್ಗಳ ಹಿನ್ನಡೆಯಲ್ಲಿದೆ.
ಶನಿವಾರ ಮೂರನೇ ದಿನದಾಟ ಆರಂಭಗೊಂಡಾಗ, ಎಡಗೈ ಆಟಗಾರ ಯಶ್ ರಾಥೋಡ್ ತನ್ನ ಇನಿಂಗ್ಸನ್ನು 137ರ ಮುನ್ನಾ ದಿನದ ಮೊತ್ತದಿಂದ ಸುಲಲಿತವಾಗಿ ಮುಂದುವರಿಸಿದರು. ತಾಳ್ಮೆಯ ಆಟವಾಡಿದ ಅವರು ಅವಕಾಶ ಸಿಕ್ಕಿದಾಗಲೆಲ್ಲ ದಕ್ಷಿಣ ವಲಯದ ಬೌಲಿಂಗ್ ದಾಳಿಯ ಮೇಲೆ ಆಕ್ರಮಣಗೈದರು.
2024-25ರ ಸಾಲಿನ ರಣಜಿ ಟ್ರೋಫಿ ಋತುವಿನಲ್ಲಿ ಗರಿಷ್ಠ ರನ್ ಗಳಿಕೆದಾರರಾಗಿರುವ ರಾಥೋಡ್, ತನ್ನ ಚೊಚ್ಚಲ ದ್ವಿಶತಕದ ಸನಿಹಕ್ಕೆ ಬಂದರು. ಆದರೆ, ಎಡಗೈ ವೇಗಿ ಗುರ್ಜಪನೀತ್ ಸಿಂಗ್ರ ತೀಕ್ಷಣ ತಿರುವಿನ ಎಸೆತವೊಂದು ಅವರ ಬೇಲ್ಗಳನ್ನು ಹಾರಿಸಿತು. ಅದರೊಂದಿಗೆ ಅವರ 8 ಗಂಟೆಗಳ ಇನಿಂಗ್ಸ್ ಕೊನೆ ಕಂಡಿತು.
ರಾಥೋಡ್ಗೆ ಉತ್ತಮ ಜೊತೆಯನ್ನು ನೀಡಿದವರು ಸಾರಾಂಶ್ ಜೈನ್. ಅವರು 193 ಎಸೆತಗಳಲ್ಲಿ 69 ರನ್ಗಳನ್ನು ಗಳಿಸಿದರು.
ದಕ್ಷಿಣ ವಲಯದ ಪರವಾಗಿ ಗುರ್ಜಪನೀತ್ 124 ರನ್ಗಳನ್ನು ನೀಡಿ 4 ವಿಕೆಟ್ಗಳನ್ನು ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ವಲಯ ಮೊದಲ ಇನಿಂಗ್ಸ್ 149
ಕೇಂದ್ರ ವಲಯ ಮೊದಲ ಇನಿಂಗ್ಸ್ 511
ದಾನಿಶ್ ಮಲೆವಾರ್ 53, ರಜತ್ ಪಾಟೀದಾರ್ 101, ಯಶ್ ರಾಥೋಡ್ 194, ಸಾರಾಂಶ್ ಜೈನ್ 69, ದೀಪಕ್ ಚಾಹರ್ 37
ಗುರ್ಜಪನೀತ್ ಸಿಂಗ್ 4-124, ಅಂಕಿತ್ ಶರ್ಮಾ 4-180
ದಕ್ಷಿಣ ವಲಯ ದ್ವಿತೀಯ ಇನಿಂಗ್ಸ್ 129-2
ತನ್ಮಯ್ ಅಗರ್ವಾಲ್ 26, ಮೋಹಿತ್ ಕಾಳೆ 38, ರವಿಚಂದ್ರನ್ ಸ್ಮರಣ್ (ಅಜೇಯ) 37, ರಿಕಿ ಭೂಯಿ (ಅಜೇಯ) 26







