Duleep Trophy | ದ್ವಿಶತಕ ಗಳಿಸಿದ ಪೂರ್ವ ವಲಯದ ಮೂರನೇ ಬ್ಯಾಟರ್ ಇಶಾನ್ ಕಿಶನ್

ಇಶಾನ್ ಕಿಶನ್ | Photo Credit : PTI
ಚೆನ್ನೈ, ಸೆ. 7: ದಕ್ಷಿಣ ವಲಯದ ವಿರುದ್ಧ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಸೋಮವಾರ ಇಶಾನ್ ಕಿಶನ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲಿ ಎರಡನೇ ಬಾರಿ ದ್ವಿಶತಕ ಗಳಿಸಿದ್ದಾರೆ.
ಕಿಶನ್ 30 ಬೌಂಡರಿ ಹಾಗೂ ಏಳು ಸಿಕ್ಸರ್ಗಳ ಸಹಾಯದಿಂದ 334 ಎಸೆತಗಳಲ್ಲಿ 270 ರನ್ ಗಳಿಸಿದರು. ಈ ಹಿಂದೆ 2016–17ರ ಋತುವಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಕಿಶನ್ ದಿಲ್ಲಿ ತಂಡದ ವಿರುದ್ಧ 273 ರನ್ ಗಳಿಸಿದ್ದರು.
ಈ ಹಿಂದೆ ದುಲೀಪ್ ಟ್ರೋಫಿ ಟೂರ್ನಿಯಲ್ಲಿ 111 ರನ್ ಗಳಿಸಿದ್ದು ಕಿಶನ್ ಅವರ ಶ್ರೇಷ್ಠ ಸಾಧನೆಯಾಗಿತ್ತು. 2024ರ ಆವೃತ್ತಿಯ ಪಂದ್ಯಾವಳಿಯಲ್ಲಿ ಈ ಸಾಧನೆ ಮಾಡಿದ್ದರು.
ಕಿಶನ್ ಅವರು ಅರುಣ್ ಲಾಲ್ ಹಾಗೂ ಸಾಬಾ ಕರೀಂ ಬಳಿಕ ಪೂರ್ವ ವಲಯದ ಪರ 200 ರನ್ ಗಳಿಸಿದ ಮೂರನೇ ಬ್ಯಾಟರ್ ಆಗಿದ್ದಾರೆ. ಲಾಲ್ 1986–87ರಲ್ಲಿ ಎರಡು ಬಾರಿ ದ್ವಿಶತಕ ಗಳಿಸಿದ್ದರು. ಕರೀಂ 1995–96ರಲ್ಲಿ ಈ ಸಾಧನೆ ಮಾಡಿದ್ದರು.
ದುಲೀಪ್ ಟ್ರೋಫಿ ಫೈನಲ್ ನಲ್ಲಿ ದ್ವಿಶತಕ ಗಳಿಸಿದ ಏಳನೇ ಬ್ಯಾಟರ್ ಕಿಶನ್. ಈ ಮೂಲಕ ಮನ್ಸೂರ್ ಅಲಿ ಖಾನ್ ಪಟೌಡಿ, ರಮನ್ ಲಾಂಬಾ, ಯಶಸ್ವಿ ಜೈಸ್ವಾಲ್, ಚೇತೇಶ್ವರ ಪೂಜಾರ, ಅಂಶುಮಾನ್ ಗಾಯಕ್ವಾಡ್ ಹಾಗೂ ಯೂಸುಫ್ ಪಠಾಣ್ರನ್ನು ಸೇರಿಕೊಂಡರು.




