ದುಲೀಪ್ ಟ್ರೋಫಿ | ಮಿಂಚಿದ ಶಹಬಾಝ್ ಅಹ್ಮದ್ : ಸೆಮಿ ಫೈನಲ್ಗೆ ಲಗ್ಗೆ ಇಟ್ಟ ಪೂರ್ವ ವಲಯ

ಶಹಬಾಝ್ ಅಹ್ಮದ್ | Photo Credit : PTI
ಬೆಂಗಳೂರು: ಶಹಬಾಝ್ ಅಹ್ಮದ್ ಭರ್ಜರಿ ಬ್ಯಾಟಿಂಗ್(167 ರನ್)ಹಾಗೂ ಅನುಕೂಲ್ ರಾಯ್ ಐದು ವಿಕೆಟ್ ಗೊಂಚಲು ನೆರವಿನಿಂದ ಈಶಾನ್ಯ ವಲಯದ ವಿರುದ್ಧ ಇನಿಂಗ್ಸ್ ಹಾಗೂ 210 ರನ್ಗಳ ಅಂತರದಿಂದ ಜಯಶಾಲಿಯಾಗಿರುವ ಪೂರ್ವ ವಲಯವು ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಸೆಮಿ ಫೈನಲ್ಗೆ ಲಗ್ಗೆ ಇಟ್ಟಿದೆ.
ಬಿಸಿಸಿಐನ ಸೆಂಟರ್ ಆಫ್ ಎಕ್ಸೆಲೆನ್ಸ್ ಮೈದಾನ-2ರಲ್ಲಿ ಮಂಗಳವಾರ ಕೊನೆಗೊಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೂರ್ವ ವಲಯ ತಂಡವು ಮೊದಲಿಗೆ 467 ರನ್ ಕಲೆ ಹಾಕಿತು. ಅಭಿಜಿತ್ ಸರ್ಕಾರ್ ಅವರ ಐದು ವಿಕೆಟ್ ಗೊಂಚಲು ನೆರವಿನಿಂದ ಪೂರ್ವ ವಲಯ ತಂಡವು ಈಶಾನ್ಯ ವಲಯವನ್ನು ಮೊದಲ ಇನಿಂಗ್ಸ್ನಲ್ಲಿ ಕೇವಲ 111 ರನ್ಗೆ ಆಲೌಟ್ ಮಾಡಿತು.
ಫಾಲೋ ಆನ್ಗೆ ಸಿಲುಕಿದ ಈಶಾನ್ಯ ವಲಯವು ಅನುಕೂಲ್ ರಾಯ್ ದಾಳಿಗೆ ತತ್ತರಿಸಿ ಕೇವಲ 146 ರನ್ಗೆ ಗಂಟುಮೂಟೆ ಕಟ್ಟಿತು. ಈ ಮೂಲಕ ಪೂರ್ವ ವಲಯ ಸುಲಭ ಜಯ ದಾಖಲಿಸಿತು.
ಬೃಹತ್ ಮೊತ್ತಕ್ಕೆ ಶಹಬಾಝ್, ಸುದೀಪ್ ಕುಮಾರ್ ಬುನಾದಿ
ಪೂರ್ವ ವಲಯ ಮೊದಲ ಇನಿಂಗ್ಸ್ನಲ್ಲಿ ಗರಿಷ್ಠ ಮೊತ್ತ ಗಳಿಸಲು ಶಹಬಾಝ್ ಪ್ರಮುಖ ಪಾತ್ರವಹಿಸಿದರು. 244 ಎಸೆತಗಳನ್ನು ಎದುರಿಸಿದ ಅವರು 17 ಬೌಂಡರಿ ಹಾಗೂ ನಾಲ್ಕು ಸಿಕ್ಸರ್ಗಳ ಸಹಿತ 167 ರನ್ ಕಲೆ ಹಾಕಿದರು. ಸುದೀಪ್ ಕುಮಾರ್ ಘರಮಿ 185 ಎಸೆತಗಳಲ್ಲಿ 25 ಬೌಂಡರಿ ಹಾಗೂ ಒಂದು ಸಿಕ್ಸರ್ಗಳ ಸಹಿತ 146 ರನ್ ಗಳಿಸಿ ಮಹತ್ವದ ಕೊಡುಗೆ ನೀಡಿದರು.
ಪೂರ್ವ ವಲಯ 138 ರನ್ಗೆ ಐದು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಆಗ ಜೊತೆಯಾಟದ ಘರಮಿ ಹಾಗೂ ಶಹಬಾಝ್ ನಿರ್ಣಾಯಕ ಜೊತೆಯಾಟ ನಡೆಸಿ ಇನಿಂಗ್ಸ್ ಆಧರಿಸಿದರು. ಘರಮಿ ಔಟಾದ ನಂತರವೂ ಶಹಬಾಝ್ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. ಪೂರ್ವ ವಲಯ 112.5 ಓವರ್ಗಳಲ್ಲಿ 467 ರನ್ ಗಳಿಸಿತು.
ಸರ್ಕಾರ್ ದಾಳಿಗೆ ಕುಸಿದ ಈಶಾನ್ಯ ವಲಯ: ಪೂರ್ವ ವಲಯದ ಶಿಸ್ತುಬದ್ಧ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ವಿಫಲವಾದ ಈಶಾನ್ಯ ವಲಯವು ತನ್ನ ಮೊದಲ ಇನಿಂಗ್ಸ್ನಲ್ಲಿ 42.5 ಓವರ್ಗಳಲ್ಲಿ ಕೇವಲ 111 ರನ್ಗೆ ಆಲೌಟಾಯಿತು.
ಸರ್ಕಾರ್ 9.5 ಓವರ್ಗಳಲ್ಲಿ 20 ರನ್ ನೀಡಿ ಐದು ವಿಕೆಟ್ ಗೊಂಚಲನ್ನು ಪಡೆದರು. ಶಹಬಾಝ್ ಕೂಡ 20 ರನ್ಗೆ 3 ವಿಕೆಟ್ಗಳನ್ನು ಉರುಳಿಸಿ ಮಹತ್ವದ ಕೊಡುಗೆ ನೀಡಿದರು.
ಅರ್ಪಿತ್(32 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು. ನಾಯಕ ರೊಂಗ್ಸೆನ್ ಜೊನಾಥನ್ 21 ರನ್ ಗಳಿಸಿದರು. ಪೂರ್ವ ವಲಯದ ಉಳಿದ ಬ್ಯಾಟರ್ಗಳು ಪ್ರತಿರೋಧ ಒಡ್ಡುವಲ್ಲಿ ವಿಫಲರಾದರು.
ಅನುಕೂಲ್ ಆಕರ್ಷಕ ಬೌಲಿಂಗ್: ಫಾಲೋ ಆನ್ಗೆ ಸಿಲುಕಿದ ಈಶಾನ್ಯ ವಲಯ ತಂಡ 10 ರನ್ಗೆ ಮೊದಲನೇ ವಿಕೆಟನ್ನು ಕಳೆದುಕೊಂಡು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿತು. ಜೋತಿನ್(39 ರನ್)ಒಂದಷ್ಟು ಪ್ರತಿರೋಧ ಒಡ್ಡಿದರು. ಆಕಾಶ್ ಚೌಧರಿ(27 ರನ್)ಹಾಗೂ ಕಿಶನ್(25 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
ಅನುಕೂಲ್ ರಾಯ್ ಪೂರ್ವ ವಲಯದ ದಾಳಿಯ ನೇತೃತ್ವವಹಿಸಿದ್ದು, 15 ಓವರ್ಗಳಲ್ಲಿ 37 ರನ್ಗೆ ಐದು ವಿಕೆಟ್ ಗೊಂಚಲನ್ನು ಪಡೆದರು. ಯುವ ಆಟಗಾರ ವೈಭವ್ ಸೂರ್ಯವಂಶಿ ಎರಡು ವಿಕೆಟ್ಗಳನ್ನು ಪಡೆದು ಮಿಂಚಿದರು. ಮುಕೇಶ್ ಕುಮಾರ್ ಹಾಗೂ ಸರ್ಕಾರ್ ತಲಾ ಒಂದು ವಿಕೆಟನ್ನು ಪಡೆದಿದ್ದಾರೆ.
ಈಶಾನ್ಯ ವಲಯವು ಅಂತಿಮವಾಗಿ 50 ಓವರ್ಗಳಲ್ಲಿ 146 ರನ್ಗೆ ಆಲೌಟಾಯಿತು. ಪೂರ್ವ ವಲಯ ಇನಿಂಗ್ಸ್ ಅಂತರದಿಂದ ಗೆಲುವು ದಾಖಲಿಸಿತು.
ಮಂಕಾದ ಮುಹಮ್ಮದ್ ಶಮಿ: ಪೂರ್ವ ವಲಯದ ಯುವ ಬೌಲರ್ಗಳು ಶಿಸ್ತುಬದ್ಧ ಲೈನ್ ಹಾಗೂ ಲೆಂಗ್ತ್ ಮೂಲಕ ನಿರಂತರವಾಗಿ ವಿಕೆಟ್ಗಳನ್ನು ಕೆಡವಿದರೆ, ತಂಡದ ಅತ್ಯಂತ ಅನುಭವಿ ವೇಗದ ಬೌಲರ್ ಮುಹಮ್ಮದ್ ಶಮಿ ಹೆಚ್ಚು ಸದ್ದು ಮಾಡಲಿಲ್ಲ.
ಭಾರತ ತಂಡದ ವೇಗದ ಬೌಲರ್ ಎರಡೂ ಇನಿಂಗ್ಸ್ಗಳಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಸೆಮಿ ಫೈನಲ್ನಲ್ಲಿ ಪೂರ್ವ ವಲಯದ ಪರ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.






