ದುಲೀಪ್ ಟ್ರೋಫಿ | 15ನೇ ವಯಸ್ಸಿನಲ್ಲಿ ನಾಯಕನಾಗಿ ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ

ವೈಭವ್ ಸೂರ್ಯವಂಶಿ | Photo Credit : PTI
ಬೆಂಗಳೂರು: ಬೆಂಗಳೂರಿನಲ್ಲಿ ರವಿವಾರ ಆರಂಭಗೊಂಡ ಮಧ್ಯ ವಲಯ ವಿರುದ್ಧದ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಪೂರ್ವ ವಲಯ ತಂಡದ ನಾಯಕತ್ವವನ್ನು ವೈಭವ್ ಸೂರ್ಯವಂಶಿ ವಹಿಸಿದ್ದಾರೆ. ಈ ಮೂಲಕ 15 ವರ್ಷದ ಹದಿಹರಯದ ಕ್ರಿಕೆಟಿಗ ತನ್ನ ವೃತ್ತಿಜೀವನದಲ್ಲಿ ಹೊಸ ಎತ್ತರ ತಲುಪಿದ್ದಾರೆ.
ನಿಯಮಿತ ನಾಯಕ ಇಶಾನ್ ಕಿಶನ್ರ ಕೈಗೆ ಗಾಯವಾದ ಹಿನ್ನೆಲೆಯಲ್ಲಿ ನಾಯಕತ್ವದ ಜವಾಬ್ದಾರಿಯು ಸೂರ್ಯವಂಶಿಯನ್ನು ಅರಸಿಕೊಂಡು ಬಂದಿದೆ.
ಬೆಂಗಳೂರಿನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಮೈದಾನದಲ್ಲಿ ನಡೆಯುತ್ತಿರುವ ಪಂದ್ಯಾವಳಿಗೆ ಪೂರ್ವ ವಲಯ ತಂಡದ ಉಪನಾಯಕನಾಗಿ ಸೂರ್ಯವಂಶಿಯನ್ನು ಆಯ್ಕೆ ಮಾಡಲಾಗಿತ್ತು.
ಮಧ್ಯ ವಲಯದ ಮೊದಲ ಇನಿಂಗ್ಸ್ನ 19ನೇ ಓವರ್ನಲ್ಲಿ ಈ ಅನಿರೀಕ್ಷಿತ ತಿರುವು ಸಂಭವಿಸಿತು. ವಿಕೆಟ್ ಕೀಪಿಂಗ್ ಮಾಡುತ್ತಿದ್ದ ವೇಳೆ ಕಿಶನ್ ಅವರ ಬಲ ಮಣಿಕಟ್ಟಿಗೆ ಬಲವಾದ ಪೆಟ್ಟು ಬಿತ್ತು. ಮೈದಾನದಲ್ಲೇ ತಂಡದ ಫಿಸಿಯೋಗಳಿಂದ ತಕ್ಷಣದ ಚಿಕಿತ್ಸೆ ಪಡೆದ ನಂತರ, ಹೆಚ್ಚಿನ ವೈದ್ಯಕೀಯ ತಪಾಸಣೆಗಾಗಿ ಕಿಶನ್ರನ್ನು ಮೈದಾನದ ಹೊರಗೆ ಕರೆದೊಯ್ಯಲಾಯಿತು. ಬಳಿಕ, ಅವರು ಮಣಿಕಟ್ಟಿಗೆ ಬ್ಯಾಂಡೇಜ್ ಸುತ್ತಿಕೊಂಡು ಹೊರಗೆ ಕುಳಿತಿರುವುದು ಕಂಡುಬಂದಿತು.
ಕಿಶನ್ ಮೈದಾನದಿಂದ ಹೊರಗುಳಿದಿದ್ದರಿಂದ ಕುಮಾರ್ ಕುಶಾಗ್ರ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಂಡರೆ, ನಾಯಕತ್ವವನ್ನು ಸೂರ್ಯವಂಶಿಗೆ ಹಸ್ತಾಂತರಿಸಲಾಯಿತು. ಕೇವಲ 15 ವರ್ಷ ವಯಸ್ಸಿನಲ್ಲಿ ಹಿರಿಯರ ಪ್ರಥಮ ದರ್ಜೆ ತಂಡವನ್ನು ಮುನ್ನಡೆಸಿರುವುದು ಅವರ ವೃತ್ತಿಜೀವನದ ಆರಂಭದಲ್ಲೇ ಒಂದು ಮಹತ್ವದ ಐತಿಹಾಸಿಕ ಮೈಲಿಗಲ್ಲಾಗಿದೆ.
2024ರ ಆರಂಭದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಸೂರ್ಯವಂಶಿಗೆ ಇದು ಕೇವಲ ಎರಡನೇ ದುಲೀಪ್ ಟ್ರೋಫಿ ಹಾಗೂ ಒಟ್ಟಾರೆಯಾಗಿ 10ನೇ ಪ್ರಥಮ ದರ್ಜೆ ಪಂದ್ಯವಾಗಿದೆ.
ಮಧ್ಯ ವಲಯ ಮೊದಲ ಇನಿಂಗ್ಸ್ನಲ್ಲಿ 266 ರನ್
ದುಲೀಪ್ ಟ್ರೋಫಿ ಪಂದ್ಯಾವಳಿಯ ಮೊದಲ ಸೆಮಿಫೈನಲ್ನಲ್ಲಿ, ಮೊದಲ ದಿನವಾದ ರವಿವಾರ ಟಾಸ್ ಗೆದ್ದ ಪೂರ್ವ ವಲಯ ಮೊದಲು ಮಧ್ಯ ವಲಯವನ್ನು ಬ್ಯಾಟಿಂಗ್ಗೆ ಇಳಿಸಿತು.
ನಾಲ್ಕು ದಿನಗಳ ಪಂದ್ಯದ ಮೊದಲ ದಿನದ ಆಟದ ಕೊನೆಯ ವೇಳೆಗೆ, ಮಧ್ಯ ವಲಯವು ಮೊದಲ ಇನಿಂಗ್ಸ್ನಲ್ಲಿ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 266 ರನ್ಗಳನ್ನು ಗಳಿಸಿದೆ.
ಆರಂಭಿಕ ಆಟಗಾರ ಆರ್ಯನ್ ಜೂಯಲ್ 46 ಮತ್ತು ರಿಂಕು ಸಿಂಗ್ 60 ರನ್ಗಳ ದೇಣಿಗೆಯನ್ನು ನೀಡಿದರು. ಯಶ್ ಠಾಕೂರ್ 30 ರನ್ ಗಳಿಸಿ ಔಟಾಗದೆ ಉಳಿದರು.
ಪೂರ್ವ ವಲಯದ ಪರವಾಗಿ ಮುಕೇಶ್ ಕುಮಾರ್ ಮತ್ತು ಅಭಿಜಿತ್ ಸರ್ಕಾರ್ ತಲಾ ಮೂರು ವಿಕೆಟ್ಗಳನ್ನು ಉರುಳಿಸಿದರೆ, ಮುಹಮ್ಮದ್ ಶಮಿ ಮತ್ತು ಮುಹಮ್ಮದ್ ಕೌನೈನ್ ಖುರೇಶಿ ತಲಾ ಎರಡು ವಿಕೆಟ್ಗಳನ್ನು ಪಡೆದರು.






