ಡಚ್ ರೆಫರಿ ರಾಬ್ ಡೀಪೆರಿಂಕ್ 38ರ ಪ್ರಾಯದಲ್ಲಿ ನಿಧನ

ರಾಬ್ ಡೀಪೆರಿಂಕ್ | Photo Credit : @Honorablefip
ಹೊಸದಿಲ್ಲಿ, ಜು.14: ನೆದರ್ಲ್ಯಾಂಡ್ಸ್ನ ಫುಟ್ಬಾಲ್ ರೆಫರಿ ರಾಬ್ ಡೀಪೆರಿಂಕ್ ತಮ್ಮ 38ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರನ್ನು ಕೆಲವೇ ವಾರಗಳ ಹಿಂದೆ FIFA ವಿಶ್ವಕಪ್ 2026ರ ರೆಫರಿಗಳ ಪಟ್ಟಿಯಿಂದ ಕೈಬಿಡಲಾಗಿತ್ತು.
ವಿಶ್ವಕಪ್ ಪಂದ್ಯಾವಳಿಯಲ್ಲಿ ವೀಡಿಯೋ ಅಸಿಸ್ಟೆಂಟ್ ರೆಫರಿ (VAR) ಆಗಿ ಕಾರ್ಯನಿರ್ವಹಿಸಲು ಡೀಪೆರಿಂಕ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಬ್ರಿಟನ್ನಲ್ಲಿ ಅವರ ವಿರುದ್ಧ ನಡೆದ ಪೊಲೀಸ್ ತನಿಖೆಯ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಅವರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಆ ನಂತರ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣವನ್ನು ಮುಚ್ಚಲಾಗಿತ್ತು. ಅವರ ಸಾವಿನ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ.
ನೆದರ್ಲ್ಯಾಂಡ್ಸ್ ಫುಟ್ಬಾಲ್ ಅಸೋಸಿಯೇಶನ್ ಡೀಪೆರಿಂಕ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು, ಅವರನ್ನು ‘‘ಅತ್ಯಂತ ಗೌರವಾನ್ವಿತ ರೆಫರಿ ಹಾಗೂ ಸಹೋದ್ಯೋಗಿ’’ ಎಂದು ಬಣ್ಣಿಸಿದೆ.
ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅವರು 284 ವೃತ್ತಿಪರ ಪಂದ್ಯಗಳಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಿದ್ದರು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ವಿಡಿಯೋ ಅಸಿಸ್ಟೆಂಟ್ ರೆಫರಿ (VAR) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
FIFA ಸಂತಾಪ: ಡೀಪೆರಿಂಕ್ ಸಾವಿಗೆ FIFA ಕೂಡ ಸಂತಾಪ ವ್ಯಕ್ತಪಡಿಸಿದೆ.
‘‘ಇಡೀ ಫುಟ್ಬಾಲ್ ಸಮುದಾಯದ ಪರವಾಗಿ, ನಾವು ಅವರ ಕುಟುಂಬ, ಸ್ನೇಹಿತರು ಮತ್ತು ಡಚ್ ಫುಟ್ಬಾಲ್ ಅಸೋಸಿಯೇಶನ್ಗೆ ಹೃತ್ಪೂರ್ವಕ ಸಂತಾಪವನ್ನು ಸಲ್ಲಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’’ ಎಂದು ಅದು ಹೇಳಿದೆ.
► ವಿಶ್ವಕಪ್ನಿಂದ ಕೈಬಿಟ್ಟಿದ್ದು ಏಕೆ?
ಹದಿಹರೆಯದ ಹುಡುಗನ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಲಂಡನ್ ನ ಮೆಟ್ರೋಪಾಲಿಟನ್ ಪೊಲೀಸರು ಎಪ್ರಿಲ್ ನಲ್ಲಿ ಡೀಪೆರಿಂಕ್ ಅವರನ್ನು ಬಂಧಿಸಿದ್ದರು.
ಆದರೆ, ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ತನಿಖೆಯನ್ನು ನಂತರ ಕೈಬಿಡಲಾಯಿತು.
FIFA ವಿಶ್ವಕಪ್ ರೆಫರಿಗಳ ಪಟ್ಟಿಯಿಂದ ತಮ್ಮನ್ನು ತೆಗೆದುಹಾಕುವ ನಿರ್ಧಾರದ ನಂತರ, ಡೀಪೆರಿಂಕ್ ಡಚ್ ದಿನಪತ್ರಿಕೆ ‘ಡೆ ಟೆಲಿಗ್ರಾಫ್’ ಜೊತೆ ಮಾತನಾಡಿ, ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಆರೋಪಿಸಿದ್ದರು.






