2ನೇ ಟೆಸ್ಟ್ ಗೆ ಮುನ್ನ ಈಡನ್ ಗಾರ್ಡನ್ಸ್ ನಲ್ಲಿ ಭಾರತ ತಂಡದ ಅಭ್ಯಾಸ

Photo Credit : PTI
ಕೋಲ್ಕತಾ, ನ. 18: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಹಾಗೂ ಕೊನೆಯ ಟೆಸ್ಟ್ಗೆ ಮುನ್ನ ಭಾರತೀಯ ಕ್ರಿಕೆಟ್ ತಂಡವು ಮಂಗಳವಾರ ಕೋಲ್ಕತಾದ ಈಡನ್ ಗಾರ್ಡನ್ಸ್ನಲ್ಲಿ ಬಿರುಸಿನ ಅಭ್ಯಾಸ ನಡೆಸಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕವು ಆತಿಥೇಯ ತಂಡವನ್ನು 30 ರನ್ ಗಳಿಂದ ಸೋಲಿಸಿದ ಬಳಿಕ ಈ ಅಭ್ಯಾಸವು ಮಹತ್ವ ಪಡೆದುಕೊಂಡಿದೆ.
ಮೊದಲ ಟೆಸ್ಟ್ನಲ್ಲಿ ಪ್ರವಾಸಿ ತಂಡದ ಸ್ಪಿನ್ ಬೌಲಿಂಗ್ ನಲ್ಲಿ ಮುಗ್ಗರಿಸಿರುವ ಹಿನ್ನೆಲೆಯಲ್ಲಿ, ಪ್ರಸಕ್ತ ಅಭ್ಯಾಸದಲ್ಲಿ ಸ್ಪಿನ್ ಬೌಲಿಂಗ್ ಎದುರಿಸುವುದಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಅಭ್ಯಾಸದಲ್ಲಿ ನಾಲ್ಕು ನೆಟ್ ಗಳನ್ನು ಹಾಕಲಾಗಿದೆ. ಆದರೆ, ಭಾರತ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಸ್ಪಿನ್ನರ್ ಗಳಿಗೆ ಮೀಸಲಾಗಿರುವ ನೆಟ್ ನಲ್ಲಿ ಹೆಚ್ಚಿನ ಸಮಯವನ್ನು ಕಳೆದಿದ್ದಾರೆ. ಮೊದಲ ಟೆಸ್ಟ್ನಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಗಳಾದ ಸೈಮನ್ ಹಾರ್ಮರ್ ಮತ್ತು ಕೇಶವ್ ಮಹಾರಾಜ್ರ ಬೌಲಿಂಗ್ ನಲ್ಲಿ ಭಾರತೀಯ ಬ್ಯಾಟರ್ ಗಳು ತತ್ತರಿಸಿದ್ದು ಅವರ ಮನದಲ್ಲಿದೆ.
ಸ್ಪಿನ್ ನೆಟ್ ನಲ್ಲಿ ರವೀಂದ್ರ ಜಡೇಜ, ಧ್ರುವ ಜೂರೆಲ್, ಸಾಯಿ ಸುದರ್ಶನ್, ದೇವದತ್ತ ಪಡಿಕ್ಕಲ್ ಮತ್ತು ವಾಶಿಂಗ್ಟನ್ ಸುಂದರ್ ನಡೆಸಿದ ಬ್ಯಾಟಿಂಗ್ ಮೇಲೆ ಗಂಭೀರ್ ನಿಗಾ ಇಟ್ಟರು.
ಗಂಭೀರ್ ರ ಉಸ್ತುವಾರಿಯಲ್ಲಿ, ಬ್ಯಾಟರ್ ಗಳು ಸ್ಪಿನ್ ಬೌಲಿಂಗ್ ನಲ್ಲಿ ತಮ್ಮ ಸ್ವೀಪ್ ಗಳು ಮತ್ತು ರಿವರ್ಸ್ ಸ್ವೀಪ್ ಗಳನ್ನು ಪರೀಕ್ಷಿಸಿದರು. ಆಫ್ ಸ್ಪಿನ್ನರ್ ಸುಂದರ್ ರ ಎಸೆತಗಳನ್ನು ಜೂರೆಲ್ ಮತ್ತು ಜಡೇಜ ಎದುರಿಸಿದರು. ಹಾರ್ಮರ್ ರ ಬೌಲಿಂಗ್ ಶೈಲಿಯನ್ನು ಅನುಸರಿಸುತ್ತಾ ಅದನ್ನು ಎದುರಿಸುವ ಪ್ರಯತ್ನಗಳನ್ನು ಬ್ಯಾಟರ್ ಗಳು ಮಾಡಿದರು.







