FIFA World Cup 2026 | ಜನಾಂಗೀಯ ವಿರೋಧಿ ಸನ್ನೆ ವಿವಾದ: ಈಜಿಪ್ಟ್ ಕೋಚ್ ಹೊಸಮ್ ಹಸನ್ ಗೆ ಹಳದಿ ಕಾರ್ಡ್

Photo Credit ; indiatoday.in
ಅಟ್ಲಾಂಟಾ, ಜು. 8: ಫಿಫಾ ವಿಶ್ವಕಪ್ ರೌಂಡ್ ಆಫ್ 16ರಲ್ಲಿ ಅರ್ಜೆಂಟೀನಾ ವಿರುದ್ಧ ಈಜಿಪ್ಟ್ ತಂಡ ಸೋತ ಬೆನ್ನಲ್ಲೇ ಮುಖ್ಯ ಕೋಚ್ ಹೊಸಮ್ ಹಸನ್ ಅವರು ಫಿಫಾದ ಜನಾಂಗೀಯ ವಿರೋಧಿ ಸನ್ನೆ ಪ್ರದರ್ಶಿಸಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಫ್ರೆಂಚ್ ರೆಫರಿ ಫ್ರಾಂಕೋಯಿಸ್ ಲೆಟೆಕ್ಸಿಯರ್ ಅವರು ಹಸನ್ ಅವರಿಗೆ ಹಳದಿ ಕಾರ್ಡ್ ತೋರಿಸಿದರು.
ಅಟ್ಲಾಂಟಾದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಈಜಿಪ್ಟ್ 2–0 ಮುನ್ನಡೆ ಸಾಧಿಸಿದ್ದರೂ, ಲಿಯೊನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಕೊನೆಯ ಹಂತದಲ್ಲಿ ಪುಟಿದೆದ್ದು 3–2 ಅಂತರದ ಗೆಲುವು ದಾಖಲಿಸಿತು. ಇದರೊಂದಿಗೆ ಹಾಲಿ ಚಾಂಪಿಯನ್ ಅರ್ಜೆಂಟೀನಾ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನವನ್ನು ಮುಂದುವರಿಸಿತು.
ಪಂದ್ಯದ ಅಂತಿಮ ಕ್ಷಣಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈಜಿಪ್ಟ್ ಗಳಿಸಿದ್ದ ಎರಡನೇ ಗೋಲನ್ನು ವೀಡಿಯೊ ಸಹಾಯಕ ತೀರ್ಪುಗಾರ (VAR) ಪರಿಶೀಲನೆಯ ಬಳಿಕ ರದ್ದುಗೊಳಿಸಿದ್ದರಿಂದ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದ್ವಿತೀಯಾರ್ಧದ ಹೆಚ್ಚುವರಿ ವೇಳೆಯಲ್ಲಿ ಈಜಿಪ್ಟ್ ಬೆಂಚ್ ನ ಒಬ್ಬ ಸದಸ್ಯರನ್ನು ರೆಫರಿ ಹೊರಗೆ ಕಳುಹಿಸಿದರು. ಅಲ್ಲದೆ, ಹಲವಾರು ಈಜಿಪ್ಟ್ ಆಟಗಾರರು ಹಾಗೂ ಕೋಚಿಂಗ್ ಸಿಬ್ಬಂದಿಯ ಸದಸ್ಯರ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಯಿತು.
ಪ್ರತಿಭಟನೆಯ ವೇಳೆ ಹೊಸಮ್ ಹಸನ್ ಅವರು ರೆಫರಿ ಫ್ರಾಂಕೋಯಿಸ್ ಲೆಟೆಕ್ಸಿಯರ್ ಎದುರು ನಿಂತು ಎರಡೂ ಕೈಗಳನ್ನು ಅಡ್ಡವಾಗಿ ಹಿಡಿದು 'ಎಕ್ಸ್' (X) ಸನ್ನೆ ಪ್ರದರ್ಶಿಸಿದರು. ಫಿಫಾ ಈ ಸನ್ನೆಯನ್ನು ತನ್ನ ಜನಾಂಗೀಯ ವಿರೋಧಿ ಅಭಿಯಾನದ ಭಾಗವಾಗಿ ಪರಿಚಯಿಸಿದೆ. ಆದರೆ, ಹಸನ್ ಈ ಸನ್ನೆಯನ್ನು ಪ್ರದರ್ಶಿಸಿದ ಕಾರಣವನ್ನು ಫಿಫಾ ಅಥವಾ ಪಂದ್ಯದ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. ಬಳಿಕ ರೆಫರಿ ಅವರಿಗೆ ಹಳದಿ ಕಾರ್ಡ್ ತೋರಿಸಿ ಆಟವನ್ನು ಮುಂದುವರಿಸಿದರು.
ಇಂತಹ ಸನ್ನೆಯನ್ನು ರೆಫರಿ ಅಂಗೀಕರಿಸಿದರೆ ಫಿಫಾದ ಮೂರು ಹಂತದ ಕಾರ್ಯವಿಧಾನ ಜಾರಿಯಾಗುತ್ತದೆ. ಮೊದಲ ಹಂತದಲ್ಲಿ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ನಿಂದನೆ ಮುಂದುವರಿದರೆ ಪಂದ್ಯವನ್ನು ಅಮಾನತುಗೊಳಿಸಬಹುದು. ಪರಿಸ್ಥಿತಿ ತೀವ್ರಗೊಂಡರೆ ಪಂದ್ಯವನ್ನು ಕೈಬಿಡುವ ಅವಕಾಶವೂ ಇದೆ.
ಆದರೆ, ಈ ಸಂದರ್ಭದಲ್ಲಿ ರೆಫರಿ ಪಂದ್ಯವನ್ನು ಸ್ಥಗಿತಗೊಳಿಸದೆ ಹೊಸಮ್ ಹಸನ್ ಅವರಿಗೆ ಹಳದಿ ಕಾರ್ಡ್ ತೋರಿಸಿ ಆಟವನ್ನು ಮುಂದುವರಿಸಿದರು. ಕೋಚ್ಗೆ ಯಾವ ಕಾರಣಕ್ಕಾಗಿ ಹಳದಿ ಕಾರ್ಡ್ ನೀಡಲಾಯಿತು ಎಂಬ ಬಗ್ಗೆ ಫಿಫಾ ಅಥವಾ ಪಂದ್ಯದ ಅಧಿಕಾರಿಗಳು ತಕ್ಷಣ ಯಾವುದೇ ಸ್ಪಷ್ಟನೆ ನೀಡಿಲ್ಲ.
ವಿವಾದಕ್ಕೆ ಕಾರಣವಾದ ಘಟನೆ ದ್ವಿತೀಯಾರ್ಧದ ಆರಂಭದಲ್ಲಿ ನಡೆದಿದೆ. ಮೊಸ್ತಫಾ ಜಿಕೊ ಮತ್ತು ಮೊಹಮ್ಮದ್ ಸಲಾಹ್ ಅವರ ನಡುವಿನ ಅತ್ಯುತ್ತಮ ಹೊಂದಾಣಿಕೆಯ ಆಟದ ಬಳಿಕ ಜಿಕೊ ಗೋಲು ಗಳಿಸಿ ಈಜಿಪ್ಟ್ ಮುನ್ನಡೆಯನ್ನು 2–0ಕ್ಕೆ ಹೆಚ್ಚಿಸಿದ್ದರು. ಆದರೆ VAR ಪರಿಶೀಲನೆಯ ಬಳಿಕ ಗೋಲ್ ನ ಸಂದರ್ಭದಲ್ಲಿ ಅರ್ಜೆಂಟೀನಾದ ಡಿಫೆಂಡರ್ ಲಿಸಾಂಡ್ರೊ ಮಾರ್ಟಿನೆಸ್ ವಿರುದ್ಧ ಫೌಲ್ ನಡೆದಿದೆ ಎಂದು ರೆಫರಿ ತೀರ್ಪು ನೀಡಿ ಗೋಲನ್ನು ರದ್ದುಗೊಳಿಸಿದರು.
ಜಿಕೊ ನಂತರ ಮತ್ತೊಮ್ಮೆ ಗೋಲು ಗಳಿಸಿದರೂ, ಆಗಾಗಲೇ ಅರ್ಜೆಂಟೀನಾ ತನ್ನ ಪುನರಾಗಮನವನ್ನು ಪೂರ್ಣಗೊಳಿಸಿತ್ತು. ಎಂಜೊ ಫೆರ್ನಾಂಡಿಸ್ ಗೋಲು ಗಳಿಸಿ ಮುನ್ನಡೆ ಸಾಧಿಸಿದ ಬಳಿಕ ಲಿಯೊನೆಲ್ ಮೆಸ್ಸಿ ನಿರ್ಣಾಯಕ ಗೋಲು ದಾಖಲಿಸಿ ಅರ್ಜೆಂಟೀನಾಗೆ 3–2 ಅಂತರದ ಗೆಲುವು ತಂದುಕೊಟ್ಟರು.
VAR ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಯಿತು. ಕೆಲ ಅಭಿಮಾನಿಗಳು ತೀರ್ಪುಗಾರರು ಅರ್ಜೆಂಟೀನಾ ಪರವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿದರು. ಆದರೆ ಪಂದ್ಯವನ್ನು ಉದ್ದೇಶಪೂರ್ವಕವಾಗಿ ಫಲಿತಾಂಶದ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ನಡೆಸಲಾಗಿದೆ ಎಂಬ ಆರೋಪವನ್ನು ಬೆಂಬಲಿಸುವ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ.
ಬಿಬಿಸಿ ರೇಡಿಯೊ 5 ಲೈವ್ಗೆ ಪ್ರತಿಕ್ರಿಯಿಸಿದ ಈಜಿಪ್ಟ್ನ ಫುಟ್ಬಾಲ್ ವಿಶ್ಲೇಷಕ ಅಹ್ಮದ್ ಯೂಸೆಫ್, VAR ತೀರ್ಪುಗಳಲ್ಲಿ ಏಕರೂಪತೆ ಇಲ್ಲ ಎಂದು ಟೀಕಿಸಿದರು.
"VAR ತೀರ್ಪುಗಳಲ್ಲಿ ಏಕರೂಪತೆ ಕಾಣಿಸುತ್ತಿಲ್ಲ. ಯಾವ ಹಂತದವರೆಗಿನ ಆಟವನ್ನು ಮರುಪರಿಶೀಲಿಸಿ ತೀರ್ಪು ನೀಡಬೇಕು ಎಂಬುದರಲ್ಲೂ ಸ್ಪಷ್ಟತೆ ಇಲ್ಲ. ಈಜಿಪ್ಟ್ ನ ಎರಡನೇ ಗೋಲನ್ನು ರದ್ದುಗೊಳಿಸಿದ ನಿರ್ಧಾರ ಸರಿಯಾಗಿರಲಿಲ್ಲ. ಗೋಲಿಗೆ ಮುನ್ನ ನಡೆದ ಘಟನೆ ತುಂಬ ಹಿಂದಿನದಾಗಿತ್ತು. ಅಲ್ಲದೆ, ಫೌಲ್ ಕೂಡ ಗಂಭೀರ ಸ್ವರೂಪದ್ದಾಗಿರಲಿಲ್ಲ. ಆದ್ದರಿಂದ ಈಜಿಪ್ಟ್ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದು ಸಹಜ," ಎಂದು ಅಹ್ಮದ್ ಯೂಸೆಫ್ ಹೇಳಿದರು.
ಈ ಗೆಲುವಿನೊಂದಿಗೆ ಅರ್ಜೆಂಟೀನಾ ವಿಶ್ವಕಪ್ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದು, ಪ್ರಶಸ್ತಿ ರಕ್ಷಣೆಯ ಹಾದಿಯಲ್ಲಿ ಮುಂದಿನ ಪಂದ್ಯದಲ್ಲಿ ಸ್ವಿಟ್ಜರ್ಲ್ಯಾಂಡ್ ತಂಡವನ್ನು ಎದುರಿಸಲಿದೆ.






