Asian Games 2026 | ಭಾರತಕ್ಕೆ ಮತ್ತೊಂದು ಬೆಳ್ಳಿ: ಅಲ್ಪ ಅಂತರದಲ್ಲಿ ಚಿನ್ನ ಕಳೆದುಕೊಂಡ ಇಲಾವೆನಿಲ್ ವಲರಿವನ್
10 ಮೀಟರ್ ಏರ್ ರೈಫಲ್ ನಲ್ಲಿ ಎರಡನೇ ಪದಕ ಗೆದ್ದ ತಮಿಳುನಾಡು ಶೂಟರ್

ಇಲಾವೆನಿಲ್ ವಲರಿವನ್ (Photo: X/@PTI_News)
ನಗೋಯಾ / ಹೊಸದಿಲ್ಲಿ: ಏಷ್ಯನ್ ಗೇಮ್ಸ್ ನ ಮಹಿಳೆಯರ 10 ಮೀಟರ್ ಏರ್ ರೈಫಲ್ ವೈಯಕ್ತಿಕ ವಿಭಾಗದ ಫೈನಲ್ ನಲ್ಲಿ ಭಾರತದ ಇಲಾವೆನಿಲ್ ವಲರಿವನ್ 252.4 ಅಂಕಗಳನ್ನು ಗಳಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ. ಕೇವಲ 0.6 ಅಂಕಗಳ ಅಂತರದಿಂದ ಅವರಿಗೆ ಚಿನ್ನದ ಪದಕ ಕೈತಪ್ಪಿತು.
ಜಪಾನ್ನ ತೈಚಿ ಹಿನಾಟಾ 253.0 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರೆ, ದಕ್ಷಿಣ ಕೊರಿಯಾದ ಬಾನ್ ಹ್ಯೋಜಿನ್ 230.4 ಅಂಕಗಳೊಂದಿಗೆ ಕಂಚಿನ ಪದಕ ಪಡೆದರು.
ಫೈನಲ್ನುದ್ದಕ್ಕೂ ಇಲಾವೆನಿಲ್ ಅಗ್ರಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸಿದರು. ಆದರೆ ಅಂತಿಮವಾಗಿ ಹಿನಾಟಾ ಅವರಿಗಿಂತ 0.6 ಅಂಕಗಳ ಹಿನ್ನಡೆ ಅನುಭವಿಸಿ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಈ ಬೆಳ್ಳಿ ಪದಕದೊಂದಿಗೆ ತಂಡ ವಿಭಾಗದಲ್ಲಿ ಗೆದ್ದಿದ್ದ ಬೆಳ್ಳಿಯ ಜತೆಗೆ ಮತ್ತೊಂದು ಪದಕವನ್ನು ತಮ್ಮ ಖಾತೆಗೆ ಸೇರಿಸಿಕೊಂಡರು.
ಫೈನಲ್ ಪ್ರವೇಶಿಸಿದ್ದ ಮತ್ತೊಬ್ಬ ಭಾರತೀಯ ಸ್ಪರ್ಧಿ ಸೋನಮ್ 167.0 ಅಂಕಗಳೊಂದಿಗೆ ಆರನೇ ಸ್ಥಾನ ಪಡೆದರು.
ಇದಕ್ಕೂ ಮುನ್ನ ಇಲಾವೆನಿಲ್ ಅವರು ಸೋನಮ್ ಮಸ್ಕರ್ ಮತ್ತು ವಿದರ್ಶಾ ವಿನೋದ್ ಅವರೊಂದಿಗೆ ಸೇರಿ ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು, ಐಚಿ-ನಗೋಯಾ ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದರು.
ಇಲಾವೆನಿಲ್ ವಲರಿವನ್ ಅವರು ವಿಶ್ವ ಚಾಂಪಿಯನ್ಶಿಪ್, ವಿಶ್ವಕಪ್, ಏಷ್ಯನ್ ಗೇಮ್ಸ್, ಏಷ್ಯನ್ ಚಾಂಪಿಯನ್ಶಿಪ್ ಸೇರಿದಂತೆ ಹಲವು ಪ್ರತಿಷ್ಠಿತ ಅಂತರರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2020 ಮತ್ತು 2024ರ ಬೇಸಿಗೆ ಒಲಿಂಪಿಕ್ಸ್ನಲ್ಲೂ ಅವರು ಭಾರತದ ಪರ ಸ್ಪರ್ಧಿಸಿದ್ದರು.
ಅವರ ಕ್ರೀಡಾ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರವು 2022ರಲ್ಲಿ ‘ಅರ್ಜುನ ಪ್ರಶಸ್ತಿ’ ನೀಡಿ ಗೌರವಿಸಿದೆ.






