ಆಸ್ಟ್ರೇಲಿಯನ್ ಓಪನ್ | ಸಬಲೆಂಕಾಗೆ ಸೋಲು, ರೈಬಾಕಿನಾ ಚಾಂಪಿಯನ್

ಎಲೆನಾ ರೈಬಾಕಿನಾ (Photo credit: X/@AustralianOpen)
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಫೈನಲ್ನಲ್ಲಿ ಕಝಕ್ಸ್ತಾನದ ಎಲೆನಾ ರಿಬಾಕಿನಾ ಅವರು ಬೆಲಾರುಸ್ನ ಅಗ್ರ ರ್ಯಾಂಕಿನ ಆಟಗಾರ್ತಿ ಆರ್ಯನಾ ಸಬಲೆಂಕಾರನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ರಾಡ್ ಲಾವೆರ್ ಅರೆನಾದಲ್ಲಿ ಶನಿವಾರ ಎರಡು ಗಂಟೆ, 18 ನಿಮಿಷಗಳ ಕಾಲ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.5ನೇ ಆಟಗಾರ್ತಿ ರಿಬಾಕಿನಾ ಅವರು ವಿಶ್ವದ ನಂ.1 ಆಟಗಾರ್ತಿ ಸಬಲೆಂಕಾರನ್ನು 4-6, 6-4, 6-4 ಸೆಟ್ಗಳ ಅಂತರದಿಂದ ಮಣಿಸಿದರು.
ಈ ಗೆಲುವು ರಿಬಾಕಿನಾ ಪಾಲಿಗೆ ವಿಶೇಷವಾಗಿದ್ದು, 2023ರಲ್ಲಿ ಇದೇ ಪಂದ್ಯಾವಳಿಯ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡರು.
ಮೂರು ವರ್ಷಗಳ ಹಿಂದೆ ಆಸ್ಟ್ರೇಲಿಯನ್ ಓಪನ್ನಲ್ಲಿ ಫೈನಲ್ಗೆ ತಲುಪಿ ಸಬಲೆಂಕಾರನ್ನು ಎದುರಿಸಿದ್ದ ರಿಬಾಕಿನಾ ಮೊದಲ ಸೆಟ್ಟನ್ನು ಗೆದ್ದುಕೊಂಡಿದ್ದರು. ಆದರೆ ಉಳಿದ ಮೂರು ಸೆಟ್ಗಳನ್ನು ಸೋತಿದ್ದರು.
ಈ ಬಾರಿ ಪಂದ್ಯದ ಆರಂಭದಲ್ಲೇ ಬಿಗಿ ಹಿಡಿತ ಸಾಧಿಸಿದ ರಿಬಾಕಿನಾ ಮೊತ್ತ ಮೊದಲ ಗೇಮ್ನಲ್ಲಿ ಸರ್ವ್ ತುಂಡರಿಸಿ ಮೊದಲ ಸೆಟ್ಟನ್ನು 6-4 ಅಂತರದಿಂದ ಗೆದ್ದುಕೊಂಡರು.
ಎರಡನೇ ಸೆಟ್ಟನ್ನು 6-4 ಅಂತರದಿಂದ ಗೆದ್ದುಕೊಂಡು ತಿರುಗೇಟು ನೀಡಿದ ಸಬಲೆಂಕಾ ಪಂದ್ಯವನ್ನು ಸಮಬಲಗೊಳಿಸಿದರು. ಮೂರನೇ ಸೆಟ್ನಲ್ಲಿ ಸಬಲೆಂಕಾ 3-0 ಮುನ್ನಡೆ ಸಾಧಿಸಿ ಆತ್ಮವಿಶ್ವಾಸದಲ್ಲಿದ್ದಂತೆ ಕಂಡುಬಂದರು. ಶಾಂತಚಿತ್ತದಿಂದ ಆಡಿದ ರಿಬಾಕಿನಾ ಸ್ಥಿರತೆಯತ್ತ ಗಮನ ನೀಡಿದರು. ನಿಧಾನವಾಗಿ ಪಂದ್ಯವನ್ನು ತನ್ನತ್ತ ಸೆಳೆದರು. ಸತತ ಐದು ಗೇಮ್ಗಳನ್ನು ಗೆದ್ದಿರುವ ರಿಬಾಕಿನಾ, ಸಬಲೆಂಕಾರನ್ನು ಒತ್ತಡಕ್ಕೆ ಸಿಲುಕಿಸಿದರು. ಮೂರನೇ ಸೆಟ್ಟನ್ನು 6-4 ಅಂತರದಿಂದ ಗೆದ್ದುಕೊಂಡ ರಿಬಾಕಿನಾ ಆಸ್ಟ್ರೇಲಿಯನ್ ಓಪನ್ನಲ್ಲಿ ಚೊಚ್ಚಲ ಸಿಂಗಲ್ಸ್ ಪ್ರಶಸ್ತಿಯನ್ನು ಖಚಿತಪಡಿಸಿದರು.
26ರ ಹರೆಯದ ರಿಬಾಕಿನಾ ವೃತ್ತಿಜೀವನದಲ್ಲಿ ಎರಡನೇ ಬಾರಿ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ. 2022ರಲ್ಲಿ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ಟ್ರೋಫಿ ಗೆದ್ದಿದ್ದರು. 2022ರ ನಂತರ ಮೊದಲ ಪ್ರಮುಖ ಪ್ರಶಸ್ತಿ ಗೆಲುವಿನೊಂದಿಗೆ ರಿಬಾಕಿನಾ ವಿಶ್ವ ರ್ಯಾಂಕಿಂಗ್ನಲ್ಲಿ ಮೂರನೇ ಸ್ಥಾನಕ್ಕೇರಲು ಸಜ್ಜಾಗಿದ್ದಾರೆ.
ವಿಶ್ವದ ನಂ.1 ಆಟಗಾರ್ತಿ ಸಬಲೆಂಕಾ ಹಿಂದಿನ ನಾಲ್ಕು ಗ್ರ್ಯಾನ್ಸ್ಲಾಮ್ ಫೈನಲ್ಗಳಲ್ಲಿ ಇದೀಗ ಮೂರನೇ ಸೋಲು ಕಂಡಿದ್ದಾರೆ. ಸಬಲೆಂಕಾ ಈ ಹಿಂದೆ ಆಸ್ಟ್ರೇಲಿಯನ್ ಓಪನ್ನಲ್ಲಿ ಸತತ ಎರಡು ಪ್ರಶಸ್ತಿಗಳ ಸಹಿತ ಒಟ್ಟು ನಾಲ್ಕು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2023, 2024ರಲ್ಲಿ ಸಿಂಗಲ್ಸ್ ಪ್ರಶಸ್ತಿ ಗೆದ್ದಿರುವ ಸಬಲೆಂಕಾ ಕಳೆದ ವರ್ಷ ಫೈನಲ್ನಲ್ಲಿ ಅಮೆರಿಕದ ಕೀ ಮ್ಯಾಡಿಸನ್ಗೆ ಸೋತಿದ್ದರು.
ಕಳೆದ ವರ್ಷ ಎರಡನೇ ಬಾರಿ ಯು.ಎಸ್. ಓಪನ್ ಟ್ರೋಫಿ ಗೆದ್ದಿದ್ದ ಸಬಲೆಂಕಾ ಫ್ರೆಂಚ್ ಓಪನ್ ಹಾಗೂ ಆಸ್ಟ್ರೇಲಿಯನ್ ಓಪನ್ ಫೈನಲ್ನಲ್ಲಿ ಸೋತಿದ್ದರು.
ಸತತ ನಾಲ್ಕನೇ ಬಾರಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಫೈನಲ್ಗೆ ಪ್ರವೇಶಿಸಿದ್ದ ಸಬಲೆಂಕಾ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿ ಹೊರಹೊಮ್ಮಿದ್ದರು. ಆದರೆ ಇತ್ತೀಚೆಗಿನ ದಿನಗಳಲ್ಲಿ ಫಾರ್ಮ್ನಲ್ಲಿದ್ದ ಆಟಗಾರ್ತಿಯರ ಪೈಕಿ ಒಬ್ಬರಾಗಿರುವ ರಿಬಾಕಿನಾ ವಿರುದ್ಧ ಆಘಾತಕಾರಿ ಸೋಲಿನ ನಂತರ ಕಣ್ಣೀರಿಟ್ಟರು.
ರಿಬಾಕಿನಾ ಅವರು ವರ್ಷಾಂತ್ಯದ ಡಬ್ಲ್ಯುಟಿಎ ಫೈನಲ್ಸ್ನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲೂ ಸಬಲೆಂಕಾಗೆ ಸೋಲಿನ ಕಹಿ ಉಣಿಸಿದ್ದರು.
ರಿಬಾಕಿನಾ ಪ್ರಸಕ್ತ ಟೂರ್ನಿಯ ಕ್ವಾರ್ಟರ್ ಫೈನಲ್ನಲ್ಲಿ ಇಗಾ ಸ್ವಿಯಾಟೆಕ್ ಹಾಗೂ ಸೆಮಿ ಫೈನಲ್ನಲ್ಲಿ ಜೆಸ್ಸಿಕಾ ಪೆಗುಲಾರನ್ನು ಸೋಲಿಸಿ ಫೈನಲ್ಗೆ ತಲುಪಿದ್ದರು.
ಮಾಸ್ಕೊದಲ್ಲಿ ಜನಿಸಿರುವ ರಿಬಾಕಿನಾ ಆರ್ಥಿಕ ಕಾರಣಗಳನ್ನು ಉಲ್ಲೇಖಿಸಿ 2018ರಲ್ಲಿ ತನ್ನ 19ನೇ ವಯಸ್ಸಿನಲ್ಲಿ ಕಝಕ್ಸ್ತಾನದ ಧ್ವಜದಡಿ ಆಡಲಾರಂಭಿಸಿದರು.







