ವೃತ್ತಿಪರ ಕ್ರಿಕೆಟ್ ನಿಂದ ನಿವೃತ್ತಿಯಾಗಲು ಎಲ್ಗರ್ ನಿರ್ಧಾರ

Photo Credit: X/EssexCricket
ಚೆನ್ನೈ, ಆ. 26: ದಕ್ಷಿಣ ಆಫ್ರಿಕಾದ ಬ್ಯಾಟರ್ ಡೀನ್ ಎಲ್ಗರ್ ಈ ವರ್ಷಾಂತ್ಯಕ್ಕೆ ವೃತ್ತಿಪರ ಕ್ರಿಕೆಟ್ ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದಾರೆ.
2026ರ ಋತುವಿನ ಅಂತ್ಯಕ್ಕೆ ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿಯಾಗುವೆ ಎಂದು ಎಲ್ಗರ್ ಬುಧವಾರ ಘೋಷಿಸಿದ್ದಾರೆ.
‘‘ತನ್ನ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವ ಉದ್ದೇಶದಿಂದ ನಿವೃತ್ತಿಯ ನಿರ್ಧಾರಕ್ಕೆ ಬಂದಿದ್ದೇನೆ. ನಿವೃತ್ತಿಗೆ ಇದು ಸರಿಯಾದ ಸಮಯವಾಗಿದೆ ಎಂದು ಭಾವಿಸಿದ್ದೇನೆ. ನನಗೀಗ 39 ವರ್ಷ. ಈ ತನಕ ನನ್ನ ಕ್ರಿಕೆಟ್ ಪಯಣ ಉತ್ತಮವಾಗಿತ್ತು. ಈ ವರ್ಷಾಂತ್ಯಕ್ಕೆ ನಾನು ನಿವೃತ್ತಿಯಾಗುವೆ’’ ಎಂದು ಎಲ್ಗರ್ ಹೇಳಿದ್ದಾರೆ.
ಎಲ್ಗರ್ 2023ರ ಅಂತ್ಯಕ್ಕೆ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರು.
ತನ್ನ ತಲೆಮಾರಿನ ಓರ್ವ ಶ್ರೇಷ್ಠ ಆರಂಭಿಕ ಆಟಗಾರನಾಗಿದ್ದ ಎಲ್ಗರ್ 12 ವರ್ಷಗಳ ಅಂತರ್ರಾಷ್ಟ್ರೀಯ ವೃತ್ತಿಬದುಕಿನಲ್ಲಿ ದ.ಆಫ್ರಿಕಾ ತಂಡವನ್ನು 13 ಬಾರಿ ನಾಯಕನಾಗಿ ಮುನ್ನಡೆಸಿದ್ದರು. 37.65ರ ಸರಾಸರಿಯಲ್ಲಿ 14 ಶತಕ ಹಾಗೂ 23 ಅರ್ಧಶತಕಗಳ ಸಹಿತ 5,000ಕ್ಕೂ ಅಧಿಕ ಟೆಸ್ಟ್ ರನ್ ಗಳಿಸಿದ್ದರು. 2017ರಲ್ಲಿ ಬಾಂಗ್ಲಾದೇಶ ವಿರುದ್ಧ ಗರಿಷ್ಠ ವೈಯಕ್ತಿಕ ಸ್ಕೋರ್ (199) ಗಳಿಸಿದ್ದರು.
2024ರ ಜನವರಿಯಲ್ಲಿ ಭಾರತದ ವಿರುದ್ಧ 185 ರನ್ ಗಳಿಸಿದ್ದ ಎಲ್ಗರ್ ದಕ್ಷಿಣ ಆಫ್ರಿಕಾ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಲು ನೆರವಾಗಿದ್ದರು.
ಕೌಂಟಿ ಚಾಂಪಿಯನ್ಶಿಪ್ನಲ್ಲಿ ಎಸ್ಸೆಕ್ಸ್ ತಂಡವನ್ನು 500ಕ್ಕೂ ಅಧಿಕ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು.






