T20 ವಿಶ್ವಕಪ್ | ವಿಲ್ ಜಾಕ್ಸ್ ಆಲ್ ರೌಂಡ್ ಆಟ, ಕೊನೆಯಲ್ಲಿ ಮುಗ್ಗರಿಸಿದ ಕಿವೀಸ್

Photo : icc-cricket
ಕೊಲಂಬೊ, ಫೆ.27: ವಿಲ್ ಜಾಕ್ಸ್ ಆಲ್ರೌಂಡ್ ಪ್ರದರ್ಶನದ (ಔಟಾಗದೆ 32, 18 ಎಸೆತ, 4 ಬೌಂಡರಿ, 1 ಸಿಕ್ಸರ್, 2-23) ನೆರವಿನಿಂದ ಇಂಗ್ಲೆಂಡ್ ಕ್ರಿಕೆಟ್ ತಂಡ ಟಿ-20 ವಿಶ್ವಕಪ್ ಟೂರ್ನಿಯ ಗ್ರೂಪ್-2ರ ಸೂಪರ್-8 ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ನಾಲ್ಕು ವಿಕೆಟ್ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಪಂದ್ಯಾವಳಿಯ ಸೂಪರ್-8ರಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ.
ಈ ಫಲಿತಾಂಶದಿಂದಾಗಿ ಕಿವೀಸ್ನ ಸೆಮಿಫೈನಲ್ ಹಾದಿ ಕಠಿಣವಾಗಿದ್ದು, ಪಾಕಿಸ್ತಾನ ತಂಡಕ್ಕೆ ಜೀವದಾನ ದೊರೆತಿದೆ. ಅದು ಶನಿವಾರ ನಡೆಯಲಿರುವ ತನ್ನ ಕೊನೆಯ ಸೂಪರ್-8 ಪಂದ್ಯದಲ್ಲಿ ಲಂಕಾವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಶ್ರೀಲಂಕಾವನ್ನು 64 ರನ್ ಗಳಿಂದ ಮಣಿಸಿದರೆ ಅಥವಾ 13.1 ಓವರ್ನಲ್ಲಿ ರನ್ ಚೇಸ್ ಮಾಡಿದರೆ ಪಾಕಿಸ್ತಾನ ತಂಡ ಸೆಮಿಫೈನಲ್ ಗೆ ತಲುಪಲಿದೆ. ಇದು ಸಾಧ್ಯವಾಗದೆ ಇದ್ದರೆ ಕಿವೀಸ್ ಸೆಮಿಫೈನಲ್ ಗೆ ತಲುಪಲಿದೆ.
ಶುಕ್ರವಾರ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ನ್ಯೂಝಿಲ್ಯಾಂಡ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆಲ್ ರೌಂಡರ್ ಗ್ಲೆನ್ ಫಿಲಿಪ್ಸ್ (39 ರನ್, 28 ಎಸೆತ) ಹಾಗೂ ವಿಕೆಟ್ಕೀಪರ್-ಬ್ಯಾಟರ್ ಟಿಮ್ ಸೀಫರ್ಟ್ (35 ರನ್, 25 ಎಸೆತ) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 159 ರನ್ ಗಳಿಸಿತು.
ಗೆಲ್ಲಲು 160 ರನ್ ಗುರಿ ಪಡೆದ ಇಂಗ್ಲೆಂಡ್ ತಂಡಕ್ಕೆ ಕೊನೆಯ ಮೂರು ಓವರ್ ಗಳಲ್ಲಿ ಗೆಲ್ಲಲು 43 ರನ್ ಅಗತ್ಯವಿತ್ತು. ಫಿಲಿಪ್ಸ್ ಎಸೆದ 18ನೇ ಓವರ್ ನಲ್ಲಿ ಎರಡು ಸಿಕ್ಸರ್ ಹಾಗೂ ಎರಡು ಬೌಂಡರಿಗಳ ಸಹಿತ 22 ರನ್ ಗಳಿಸಿ ಪಂದ್ಯದ ಚಿತ್ರಣ ಬದಲಿಸಿದ ಜಾಕ್ಸ್ ಹಾಗೂ ರೆಹಾನ್ ಅಹ್ಮದ್ (ಔಟಾಗದೆ 19, 7 ಎಸೆತ, 1 ಬೌಂಡರಿ, 2 ಸಿಕ್ಸರ್) ಇಂಗ್ಲೆಂಡ್ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ಅಂತಿಮವಾಗಿ ಇಂಗ್ಲೆಂಡ್ 19.3 ಓವರ್ಗಳಲ್ಲಿ ಆರು ವಿಕೆಟ್ಗಳ ನಷ್ಟಕ್ಕೆ 161 ರನ್ ಗಳಿಸಿತು.
ಇದಕ್ಕೂ ಮೊದಲು ಇನಿಂಗ್ಸ್ ಆರಂಭಿಸಿದ ಸೀಫರ್ಟ್ ಹಾಗೂ ಫಿನ್ ಅಲೆನ್ (29 ರನ್, 19 ಎಸೆತ, 3 ಸಿಕ್ಸರ್) ಏಳು ಓವರ್ಗಳಲ್ಲಿ 64 ರನ್ ಕಲೆ ಹಾಕಿ ಉತ್ತಮ ಆರಂಭ ಒದಗಿಸಿದರು. ಆದರೆ ಈ ಇಬ್ಬರು ಬೆನ್ನುಬೆನ್ನಿಗೆ ಔಟಾದರು.
ಆಗ ಜೊತೆಯಾದ ಫಿಲಿಪ್ಸ್ ಹಾಗೂ ರಚಿನ್ ರವೀಂದ್ರ (11 ರನ್) ಮೂರನೇ ವಿಕೆಟ್ಗೆ 21 ಎಸೆತಗಳಲ್ಲಿ 31 ರನ್ ಜೊತೆಯಾಟ ನಡೆಸಿ ಇನಿಂಗ್ಸ್ ದುರಸ್ತಿ ಮಾಡಿದರು. ರವೀಂದ್ರ 11 ರನ್ ಗಳಿಸಿ ರೆಹಾನ್ ಅಹ್ಮದ್ ಗೆ ವಿಕೆಟ್ ಒಪ್ಪಿಸಿದರು.
ಮಾರ್ಕ್ ಚಾಪ್ಮನ್ (15 ರನ್) ಹಾಗೂ ಡ್ಯಾರಿಲ್ ಮಿಚೆಲ್ (3 ರನ್) ತಮ್ಮ ಕಳಪೆ ಪ್ರದರ್ಶನ ಮುಂದುವರಿಸಿದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ನಾಯಕ ಮಿಚೆಲ್ ಸ್ಯಾಂಟ್ನರ್ (ಔಟಾಗದೆ 9, 5 ಎಸೆತ) ಹಾಗೂ ಕೋಲ್ ಮೆಕ್ಕಾಂಚಿ (14 ರನ್, 12 ಎಸೆತ) ಕಿವೀಸ್ ಗೌರವಾರ್ಹ ಮೊತ್ತ ಗಳಿಸುವಲ್ಲಿ ನೆರವಾದರು.
ಇಂಗ್ಲೆಂಡ್ ಕ್ರಿಕೆಟ್ ತಂಡದ ಬೌಲಿಂಗ್ ವಿಭಾಗದಲ್ಲಿ ವಿಲ್ ಜಾಕ್ಸ್ (2-23), ಆದಿಲ್ ರಶೀದ್ (2-28) ಹಾಗೂ ರೆಹಾನ್ ಅಹ್ಮದ್ (2-28) ತಲಾ ಎರಡು ವಿಕೆಟ್ಗಳನ್ನು ಪಡೆದರು.
ಇದೇ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ 61 ರನ್ಗಳಿಂದ ಗೆದ್ದಿದ್ದ ಆಡುವ 11ರ ಬಳಗವನ್ನೇ ಕಿವೀಸ್ ತಂಡ ಕಣಕ್ಕಿಳಿಸಿದೆ. ಇಂಗ್ಲೆಂಡ್ ತಂಡ ಆಡುವ ಬಳಗದಲ್ಲಿ ಒಂದು ಬದಲಾವಣೆ ಮಾಡಿದೆ. ವೇಗದ ಬೌಲರ್ ಜಮೀ ಓವರ್ಟನ್ ಬದಲಿಗೆ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ಗೆ ಅವಕಾಶ ನೀಡಿದೆ. ಅಹ್ಮದ್ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿ ಆಡುವ ಅವಕಾಶ ಪಡೆದರು.
ಸಂಕ್ಷಿಪ್ತ ಸ್ಕೋರ್
ನ್ಯೂಝಿಲ್ಯಾಂಡ್: 20 ಓವರ್ಗಳಲ್ಲಿ 159/7
(ಗ್ಲೆನ್ ಫಿಲಿಪ್ಸ್ 39, ಟಿಮ್ ಸೀಫರ್ಟ್ 35, ಫಿನ್ ಅಲೆನ್ 29, ವಿಲ್ ಜಾಕ್ಸ್ 2-23, ಆದಿಲ್ ರಶೀದ್ 2-28, ರೆಹಾನ್ ಅಹ್ಮದ್ 2-28)
ಇಂಗ್ಲೆಂಡ್: 19.3 ಓವರ್ಗಳಲ್ಲಿ 161/6
(ಟಾಮ್ ಬಾಂಟನ್ 33, ವಿಲ್ ಜಾಕ್ಸ್ ಔಟಾಗದೆ 32, ಹ್ಯಾರಿ ಬ್ರೂಕ್ 26, ರೆಹಾನ್ ಅಹ್ಮದ್ ಔಟಾಗದೆ 19, ರಚಿನ್ ರವೀಂದ್ರ 3-19)
ಪಂದ್ಯಶ್ರೇಷ್ಠ: ವಿಲ್ ಜಾಕ್ಸ್






