ಬಲಿಷ್ಠ ಭಾರತದ ಎದುರು ಇಂಗ್ಲೆಂಡ್ ಗೆ ಪರೀಕ್ಷೆ: ಕೋಚ್ ಮೆಕಲಮ್

ಬ್ರೆಂಡನ್ ಮೆಕಲಮ್ | PC : X
ಲಂಡನ್: ಮುಂಬರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತನ್ನ ತಂಡವು ಬಲಿಷ್ಠ ಭಾರತೀಯ ತಂಡದ ಎದುರು ಪರೀಕ್ಷೆಗೊಳಪಡಲಿದೆ ಎಂಬುದಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಬ್ರೆಂಡನ್ ಮೆಕಲಮ್ ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಕೆಂಪು ಚೆಂಡಿನ (ಟೆಸ್ಟ್) ಕ್ರಿಕೆಟ್ನಲ್ಲಿ ಯಾವ ದಿಕ್ಕಿನಲ್ಲಿ ಮುಂದುವರಿಯಬೇಕು ಎನ್ನುವ ಬಗ್ಗೆ ಆಟಗಾರರಲ್ಲಿ ಸ್ಪಷ್ಟತೆ ಇದೆ ಎನ್ನುವ ಬಗ್ಗೆ ನನಗೆ ಭರವಸೆ ಇದೆ ಎಂಬುದಾಗಿಯೂ ಅವರು ಹೇಳಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯು ಜೂನ್ 20ರಂದು ಆರಂಭಗೊಳ್ಳಲಿದೆ.
ಉಭಯ ತಂಡಗಳು ನೂತನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಚಕ್ರವನ್ನು ಆರಂಭಿಸಲಿದ್ದು, ಭಾರತದ ಸವಾಲನ್ನು ಇಂಗ್ಲೆಂಡ್ ಎದುರು ನೋಡುತ್ತಿದೆ ಎಂದು ಮೆಕಲಮ್ ಹೇಳಿದರು.
‘‘ಭಾರತವು ಅಮೋಘ ಕ್ರಿಕೆಟ್ ರಾಷ್ಟ್ರ. ಅವರು ಭಾರೀ ಭರವಸೆಯೊಂದಿಗೆ ಇಲ್ಲಿಗೆ ಬರುತ್ತಾರೆ. ಅವರನ್ನು ನೋಡುವುದನ್ನು ನಾವು ಎದುರು ನೋಡುತ್ತಿದ್ದೇವೆ’’ ಎಂದು ‘ಸ್ಕೈ ಸ್ಪೋರ್ಟ್ಸ್ ಕ್ರಿಕೆಟ್’ನೊಂದಿಗೆ ಮಾತನಾಡಿದ ಅವರು ಹೇಳಿದರು.
‘‘ಆಟಗಾರರು ತಾಜಾತನ ಹೊಂದಬೇಕಾಗಿರುವುದು ಅಗತ್ಯವಾಗಿದೆ. ಟೆಸ್ಟ್ ತಂಡವಾಗಿ ನಾವು ಹೇಗಿರಬೇಕು ಎನ್ನುವುದು ನಮಗೆ ಗೊತ್ತಿದೆ’’ ಎಂದರು.
ಆತಿಥೇಯ ತಂಡದಲ್ಲಿ ಗಾಯಾಳು ವೇಗಿ ಮಾರ್ಕ್ ವುಡ್ ಕನಿಷ್ಠ ಮೊದಲ ಮೂರು ಟೆಸ್ಟ್ಗಳಿಗೆ ಲಭ್ಯರಿರುವುದಿಲ್ಲ. ಅದೇ ವೇಳೆ, ಜೋಫ್ರಾ ಆರ್ಚರ್ ಮತ್ತು ಗಸ್ ಆ್ಯಟ್ಕಿನ್ಸನ್ ಕೂಡ ಮೊದಲ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ.
ಇದರ ಹೊರತಾಗಿಯೂ, ಇಂಗ್ಲೆಂಡ್ನ ಬೌಲಿಂಗ್ ಸಾಮರ್ಥ್ಯದ ಬಗ್ಗೆ ಮೆಕಲಮ್ ಭರವಸೆ ವ್ಯಕ್ತಪಡಿಸಿದ್ದಾರೆ.







