ಭಾರತದ ವಿರುದ್ಧದ 3ನೇ ಟೆಸ್ಟ್ ನಲ್ಲಿ ನಿಧಾನ ಗತಿಯ ಓವರ್; ಇಂಗ್ಲೆಂಡ್ ಗೆ 2 ಡಬ್ಲ್ಯುಟಿಸಿ ಅಂಕ ಕಡಿತ
ತಂಡಕ್ಕೆ ಪಂದ್ಯಶುಲ್ಕದ 10 ಶೇ. ದಂಡ

PC : ICC
ದುಬೈ, ಜು. 16: ಪ್ರವಾಸಿ ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ಈಗ ನಡೆಯುತ್ತಿರುವ ಆ್ಯಂಡರ್ ಸನ್-ತೆಂಡುಲ್ಕರ್ ಟೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ನಿಧಾನ ಗತಿಯಲ್ಲಿ ಬೌಲಿಂಗ್ ಮಾಡಿರುವುದಕ್ಕಾಗಿ ಇಂಗ್ಲೆಂಡ್ ತಂಡದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಅಂಕಗಳಿಂದ ಎರಡು ಅಂಕಗಳನ್ನು ಕಳೆಯಲಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬುಧವಾರ ಘೋಷಿಸಿದೆ.
ಅದೂ ಅಲ್ಲದೆ, ನಾಯಕ ಬೆನ್ ಸ್ಟೋಕ್ಸ್ ತಂಡಕ್ಕೆ ಪಂದ್ಯ ಶುಲ್ಕದ 10 ಶೇಕಡ ದಂಡವನ್ನೂ ವಿಧಿಸಲಾಗಿದೆ.
ಮೂರನೇ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ 22 ರನ್ ಗಳಿಂದ ರೋಮಾಂಚಕವಾಗಿ ಗೆದ್ದಿದೆ.
ಇದರೊಂದಿಗೆ, ಇಂಗ್ಲೆಂಡ್ನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕವು 24ರಿಂದ 22ಕ್ಕೆ ಇಳಿದಿದೆ ಮತ್ತು ಶೇಕಡಾವಾರು ಅಂಕವು 66.67 ಶೇಕಡದಿಂದ 61.11 ಶೇಕಡಕ್ಕೆ ತಗ್ಗಿದೆ.
ಹಾಗಾಗಿ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ರ್ಯಾಂಕಿಂಗ್ ಪಟ್ಟಿಯಲ್ಲಿ ಇಂಗ್ಲೆಂಡ್ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಶ್ರೀಲಂಕಾ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಏರಿದೆ.
ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅಪರಾಧವನ್ನು ಒಪ್ಪಿಕೊಂಡು ದಂಡವನ್ನು ಸ್ವೀಕರಿಸಿದ್ದಾರೆ. ಐಸಿಸಿ ಉನ್ನತ ಪಂದ್ಯ ರೆಫರಿಗಳ ಸಮಿತಿಯ ರಿಚೀ ರಿಚರ್ಡ್ ಸನ್ ಈ ದಂಡವನ್ನು ವಿಧಿಸಿದ್ದಾರೆ.







