ಡೆಲ್ಲಿ ಕ್ಯಾಪಿಟಲ್ಸ್ ಸಹಾಯಕ ಕೋಚ್ ಆಗಿ ಇಂಗ್ಲೆಂಡ್ ಮಾಜಿ ಬ್ಯಾಟರ್ ಇಯಾನ್ ಬೆಲ್ ನೇಮಕ

ಇಯಾನ್ ಬೆಲ್ | Photo Credit : ICC
ಹೊಸದಿಲ್ಲಿ, ಫೆ.10: ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ತನ್ನ ನೂತನ ಸಹಾಯಕ ಕೋಚ್ ಅಗಿ ಇಂಗ್ಲೆಂಡ್ನ ಮಾಜಿ ಬ್ಯಾಟರ್ ಇಯಾನ್ ಬೆಲ್ರನ್ನು ಮಂಗಳವಾರ ನೇಮಕ ಮಾಡಿದೆ.
2025ರ ಆವೃತ್ತಿಯ ಐಪಿಎಲ್ನಲ್ಲಿ ಕೇವಲ ಒಂದು ಅಂಕದಿಂದ ಪ್ಲೇ ಆಫ್ ಸ್ಥಾನ ವಂಚಿತವಾಗಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದ್ದ ಡೆಲ್ಲಿ ತಂಡಕ್ಕೆ 43ರ ವಯಸ್ಸಿನ ಬೆಲ್ ಸೇರ್ಪಡೆಯಾಗಿದ್ದಾರೆ.
ದಿಲ್ಲಿ ಮೂಲದ ಫ್ರಾಂಚೈಸಿ ಪರವಾಗಿ ಬೆಲ್ ಅವರು ಮುಖ್ಯ ಕೋಚ್ ಹೇಮಂಗ್ ಬದಾನಿ, ಸಹಾಯಕ ಕೋಚ್ ಮ್ಯಾಥ್ಯೂ ಮೋಟ್ ಹಾಗೂ ಟೀಮ್ ಮೆಂಟರ್ ಕೆವಿನ್ ಪೀಟರ್ಸನ್ರೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ.
ಡೆಲ್ಲಿ ಫ್ರಾಂಚೈಸಿ ಪರ ವೇಣುಗೋಪಾಲ್ ರಾವ್(ಕ್ರಿಕೆಟ್ ನಿರ್ದೇಶಕ)ಹಾಗೂ ಮುನಾಫ್ ಪಟೇಲ್(ಬೌಲಿಂಗ್)ಕೂಡ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡಲಿದ್ದಾರೆ.
ಬೆಲ್ ಅವರು ಇಂಗ್ಲೆಂಡ್ ತಂಡದ ಪರ 118 ಟೆಸ್ಟ್ ಹಾಗೂ 161 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇಂಗ್ಲೆಂಡ್ ಅಂಡರ್-19 ತಂಡದ ಮಾಜಿ ನಾಯಕ ಬೆಲ್ ಅವರು ಈ ಮೊದಲು ಇಂಗ್ಲೆಂಡ್ನ ಜೂನಿಯರ್ ತಂಡಗಳಿಗೆ ತರಬೇತಿ ನೀಡಿದ್ದಾರೆ.




