ಆ್ಯಶಸ್ ಸರಣಿಯಿಂದ ಹೊರಗುಳಿದ ಇಂಗ್ಲೆಂಡ್ ಬ್ಯಾಟರ್ ಒಲಿ ಪೋಪ್

Photo:PTI
ಲಂಡನ್: ಇಂಗ್ಲೆಂಡ್ ಬ್ಯಾಟರ್ ಒಲಿ ಪೋಪ್ ಲಾರ್ಡ್ಸ್ ನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಬಲ ಭುಜನೋವಿಗೆ ಒಳಗಾಗಿದ್ದು ಆ್ಯಶಸ್ ಸರಣಿಯ ಇನ್ನುಳಿದ 3 ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮಂಗಳವಾರ ತಿಳಿಸಿದೆ.
ಲಂಡನ್ನಲ್ಲಿ ಸೋಮವಾರ ನಡೆಸಿರುವ ಸ್ಕ್ಯಾನಿಂಗ್ನಲ್ಲಿ ಪೋಪ್ಗೆ ಗಂಭೀರ ಗಾಯವಾಗಿರುವುದು ಬಹಿರಂಗವಾಗಿದೆ. ಅವರು ಈ ಬೇಸಿಗೆಯ ಉಳಿದಿರುವ ಅಭಿಯಾನದಿಂದ ಹೊರಗುಳಿಯಲಿದ್ದು, ಅವರಿಗೆ ಸರ್ಜರಿಯ ಅಗತ್ಯವಿದೆ ಎಂದು ಇಸಿಬಿ ಪ್ರಕಟನೆಯೊಂದರಲ್ಲಿ ತಿಳಿಸಿದೆ. ಗಾಯದ ಸಮಸ್ಯೆಯ ಹೊರತಾಗಿಯೂ ಗುರುವಾರದಿಂದ ಹೆಡ್ಡಿಂಗ್ಲೆಯಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್ಗೆ ಇಂಗ್ಲೆಂಡ್ ಪ್ರಕಟಿಸಿರುವ 15 ಸದಸ್ಯರ ತಂಡದಲ್ಲಿ ಪೋಪ್ ಸ್ಥಾನ ಪಡೆದಿದ್ದರು. ತಂಡದಲ್ಲಿ ಯಾವುದೇ ಬದಲಿ ಆಟಗಾರನನ್ನು ನೇಮಿಸುವುದಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಇಂಗ್ಲೆಂಡ್ ಸದ್ಯ ಸರಣಿಯಲ್ಲಿ 0-2 ಅಂತರದಿಂದ ಹಿನ್ನಡೆಯಲ್ಲಿದ್ದು, ಇನ್ನೊಂದು ಪಂದ್ಯದಲ್ಲಿ ಸೋತರೆ ಆಸ್ಟ್ರೇಲಿಯದಿಂದ ಆ್ಯಶಸ್ ಕಪ್ನ್ನು ವಶಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಪೋಪ್ ಈ ತನಕ ಸರಣಿಯಲ್ಲಿ ಆಡಿರುವ 4 ಇನಿಂಗ್ಸ್ಗಳಲ್ಲಿ ಕೇವಲ 90 ರನ್ ಗಳಿಸಿದ್ದಾರೆ.





