ಇಂಗ್ಲೆಂಡ್-ಭಾರತ ಟೆಸ್ಟ್ ಸರಣಿ ; ‘ಬೇಝ್ಬಾಲ್’ಧೋರಣೆ ಪರೀಕ್ಷೆಗೆ ಉತ್ತಮ ಅವಕಾಶ: ಮೆಕಲಮ್

ಮೆಕಲಮ್ | Photo: PTI
ವೆಲಿಂಗ್ಟನ್: ಮುಂಬರುವ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪ್ರಬಲ ಸವಾಲು ಇಂಗ್ಲೆಂಡನ್ನು ಎದುರು ನೋಡುತ್ತಿದೆ ಎಂದು ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಬ್ರೆಂಡನ್ ಮೆಕಲಮ್ ಹೇಳಿದ್ದಾರೆ. ಈ ಸರಣಿಯು ‘ಬೇಝ್ಬಾಲ್’ ಎಂಬುದಾಗಿ ಹೆಸರಾಗಿರುವ ಇಂಗ್ಲೆಂಡಿನ ಆಕ್ರಮಣಕಾರಿ ಟೆಸ್ಟ್ಕ್ರಿಕೆಟ್ ಮಾದರಿಯ ಅಂತಿಮ ಪರೀಕ್ಷೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯು 2024 ಜನವರಿ 25ರಂದು ಆರಂಭಗೊಳ್ಳುತ್ತದೆ. ಭಾರತದಲ್ಲಿ ನಡೆಯುವ ಈ ಸರಣಿಯಲ್ಲಿ ಐದು ಪಂದ್ಯಗಳನ್ನು ಆಡಲಾಗುವುದು.
ಈ ಸರಣಿಗೆ ಇಂಗ್ಲೆಂಡ್ ಸಿದ್ಧಗೊಳ್ಳುತ್ತಿರುವಂತೆಯೇ, ಉತ್ಸುಕತೆ ಮತ್ತು ನಿರೀಕ್ಷೆ ಗೋಚರಿಸುತ್ತಿದೆ ಎಂದು ಆರ್ಸಿಬಿ ಇನೋವೇಶನ್ ಲ್ಯಾಬ್ ಏರ್ಪಡಿಸಿದ ‘ಲೀಡರ್ಸ್ ಮೀಟ್ ಇಂಡಿಯ’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಮೆಕಲಮ್ ಹೇಳಿದರು. ಟೆಸ್ಟ್ ಕ್ರಿಕೆಟಿನಲ್ಲಿ ಇಂಗ್ಲೆಂಡ್ ಅನುಸರಿಸುತ್ತಿರುವ ದಿಟ್ಟ ಮತ್ತು ಆಕ್ರಮಣಕಾರಿ ಧೋರಣೆಯ ಪರಿಣಾಮವನ್ನು ಅಳೆಯಲು ಈ ಟೆಸ್ಟ್ ಸರಣಿಯು ಉತ್ತಮ ಅವಕಾಶವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
‘‘ಭಾರತದಲ್ಲಿ ನಡೆಯುವ ಐದು ಟೆಸ್ಟ್ ಗಳ ಸರಣಿಯಲ್ಲಿ ಅತ್ಯುತ್ತಮ ಸ್ಥಿತಿಯಲ್ಲಿರುವ ಭಾರತ ತಂಡದಿಂದ ನಾವು ಬೃಹತ ಸವಾಲನ್ನು ಎದುರುನೋಡುತ್ತಿದ್ದೇವೆ. ಈ ಬಗ್ಗೆ ನಾನು ರೋಮಾಂಚಿತನಾಗಿದ್ದೇನೆ. ಯಾಕೆಂದರೆ ಉತ್ತಮ ತಂಡದ ಜೊತೆಗೆ ನಮ್ಮನ್ನು ಪರೀಕ್ಷೆಗೊಳಪಡಿಸಲು ನಾನು ಬಯಸುತ್ತೇವೆ. ಭಾರತವು ತನ್ನದೇ ಹಿನ್ನೆಲೆಯಲ್ಲಿ ಉತ್ತಮ ತಂಡವಾಗಿದೆ. ಇದು ನಮಗೆ ಉತ್ತಮ ಸವಾಲಾಗಿರುತ್ತದೆ’’ ಎಂದರು.







