ಐಪಿಎಲ್ನ ಉಳಿದ 16 ಪಂದ್ಯಗಳ ಆತಿಥ್ಯಕ್ಕೆ ಇಂಗ್ಲೆಂಡ್ ಆಸಕ್ತಿ: ವರದಿ

ಸಾಂದರ್ಭಿಕ ಚಿತ್ರ | PC : PTI
ಲಂಡನ್: ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು(ಬಿಸಿಸಿಐ) 2025ರ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಒಂದು ವಾರ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಐಪಿಎಲ್ ಟೂರ್ನಿಯಲ್ಲಿ ಉಳಿದಿರುವ 16 ಪಂದ್ಯಗಳ ಆತಿಥ್ಯವನ್ನು ವಹಿಸಲು ಇಂಗ್ಲೆಂಡ್ ಒಲವು ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.
ಭದ್ರತೆ ಕುರಿತ ಕಳವಳಗಳು ಬಗೆಹರಿದರೆ ಉಳಿದ ಪಂದ್ಯಗಳನ್ನು ಭಾರತದಲ್ಲೇ ಆಯೋಜಿಸಲು ಬಿಸಿಸಿಐ ಮೊದಲ ಆದ್ಯತೆ ನೀಡಲಿದೆ. ಆದರೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯು ಸಂಪರ್ಕಿಸಿದರೆ ಆತಿಥ್ಯದ ಬಗ್ಗೆ ಚರ್ಚೆಗೆ ಮುಕ್ತವಾಗಿದೆ.
ಅಗತ್ಯವಿದ್ದರೆ ಇಂಗ್ಲೆಂಡ್ ಮಧ್ಯಪ್ರವೇಶಿಸಲು ಸಿದ್ಧವಿದೆ ಎಂದು ಇಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಚರ್ಡ್ ಗೌಲ್ಡ್ ದೃಢಪಡಿಸಿದರು.
‘‘ನಮಗೆ ಸಾಧ್ಯವಾದಾಗಲೆಲ್ಲಾ ನಾವು ಬಿಸಿಸಿಐನಲ್ಲಿರುವ ನಮ್ಮ ಸಹವರ್ತಿಗಳಿಗೆ ಸಹಾಯ ಮಾಡುತ್ತೇವೆ’’ಎಂದು ರಿಚರ್ಡ್ ಅವರು ಇಂಗ್ಲೀಷ್ ಮಾಧ್ಯಮ ಸಂಸ್ಥೆ ಮೇಲ್ ಆನ್ಲೈನ್ಗೆ ತಿಳಿಸಿದ್ದಾರೆ.
10 ಫ್ರಾಂಚೈಸಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಆಟಗಾರರ ಸುರಕ್ಷತೆ ಪ್ರಸಾರಕರ ಅಭಿಪ್ರಾಯಗಳು ಹಾಗೂ ಅಭಿಮಾನಿಗಳ ಭಾವನೆಗಳ ಬಗ್ಗೆ ಕಳವಳ ವ್ಯಕ್ತವಾದ ನಂತರ ಒಂದು ವಾರದ ತನಕ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ ಎಂದು ಬಿಸಿಸಿಐ ಶುಕ್ರವಾರ ತಿಳಿಸಿದೆ.
ಜೂನ್ 20ರಂದು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದ್ದು, ಅದಕ್ಕೂ ಮೊದಲು ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳನ್ನು ಬ್ರಿಟನ್ ನಲ್ಲಿ ಆಡುವುದು ಉತ್ತಮ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಸಲಹೆ ನೀಡಿದ್ದಾರೆ.
ಏಶ್ಯಕಪ್ ನಡೆಯಲಿರುವ ಸೆಪ್ಟಂಬರ್ನಲ್ಲಿ ಐಪಿಎಲ್ ಪಂದ್ಯಗಳನ್ನು ಮುಂದುವರಿಸುವ ಸಾಧ್ಯತೆ ಇದೆ.