ಭಾರತ ವಿರುದ್ಧ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ
ಶುಐಬ್ ಬಶೀರ್ ಸಹಿತ ಮೂವರು ಹೊಸ ಮುಖಗಳಿಗೆ ಮಣೆ

Photo: NDTV
ಲಂಡನ್: ಭಾರತ ವಿರುದ್ಧ ಜನವರಿಯಲ್ಲಿ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಇಂಗ್ಲೆಂಡ್ ಸೋಮವಾರ 16 ಸದಸ್ಯರುಗಳಿರುವ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದು, ಇನ್ನಷ್ಟೇ ಅಂತರರಾಷ್ಟ್ರೀಯ ಕ್ರಿಕೆಟಿಗೆ ಕಾಲಿಡಬೇಕಾಗಿರುವ ಮೂವರು ಯುವ ಆಟಗಾರರಿಗೆ ಮಣೆ ಹಾಕಿದೆ.
ಹೊಸ ಮುಖಗಳ ಪೈಕಿ ಸರ್ರೆಯ ವೇಗದ ಬೌಲರ್ ಗಸ್ ಅಟ್ಕಿನ್ಸನ್ ಜೊತೆಗೆ ಲಂಕಾಶೈರ್ನ ಸ್ಪಿನ್ನರ್ಗಳಾದ ಟಾಮ್ ಹಾರ್ಟ್ಲಿ ಹಾಗೂ ಸೋಮರ್ಸೆಟ್ ನ ಶುಐಬ್ ಬಶೀರ್ ಅವರಿದ್ದಾರೆ.
ಅಟ್ಕಿನ್ಸನ್ ಈ ವರ್ಷ ಐದು ಪಂದ್ಯಗಳಲ್ಲಿ 20 ವಿಕೆಟ್ ಗಳನ್ನು ಕಬಳಿಸಿ ಸರ್ರೆ ತಂಡ ಕೌಂಟಿ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಟ್ಕಿನ್ಸನ್ ಇತ್ತೀಚೆಗೆ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ನಲ್ಲಿ ಭಾಗವಹಿಸಿದ್ದ ಇಂಗ್ಲೆಂಡ್ ತಂಡದ ಭಾಗವಾಗಿದ್ದರು.
ಹಾರ್ಟ್ಲಿ ಹಾಗೂ ಬಶೀರ್ ನವೆಂಬರ್ನಲ್ಲಿ ಯುಎಇನಲ್ಲಿ ನಡೆದಿದ್ದ ಇಂಗ್ಲೆಂಡ್ ಲಯನ್ಸ್ ತಂಡದೊಂದಿಗಿನ ತರಬೇತಿಯಲ್ಲಿ ಅಮೂಲ್ಯ ಅನುಭವ ಪಡೆದಿದ್ದರು.
2022ರ ಡಿಸೆಂಬರ್ನಲ್ಲಿ ಪಾಕಿಸ್ತಾನ ವಿರುದ್ಧ ತನ್ನ ಚೊಚ್ಚಲ ಪಂದ್ಯದಲ್ಲಿ 7 ವಿಕೆಟ್ ಗೊಂಚಲು ಪಡೆದ ಇಂಗ್ಲೆಂಡಿನ ಯುವ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದ 19ರ ಹರೆಯದ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಕೂಡ ತಂಡಕ್ಕೆ ವಾಪಸಾಗಿದ್ದಾರೆ.
20ರ ಹರೆಯದ ಬಶೀರ್ ತನ್ನ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 10 ವಿಕೆಟ್ ಗಳನ್ನು ಕಬಳಿಸಿದ್ದು ಟೆಸ್ಟ್ ತಂಡಕ್ಕೆ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ. ಸೋಮರ್ಸೆಟ್ನೊಂದಿಗೆ ವೃತ್ತಿಪರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಜೂನ್ ನಲ್ಲಿ ಬಶೀರ್ ವೃತ್ತಿಪರ ಕ್ರಿಕೆಟಿಗೆ ಕಾಲಿಟ್ಟಿದ್ದರು. ಕೇವಲ ಆರು ಪ್ರಥಮ ದರ್ಜೆ ಪಂದ್ಯಗಳನ್ನು ಆಡಲಿರುವ ಬಶೀರ್ ಯುಎಇನಲ್ಲಿ ಇತ್ತೀಚೆಗೆ ನಡೆದಿದ್ದ ತರಬೇತಿ ಶಿಬಿರದಲ್ಲಿ ಭಾಗಿಯಾಗಿದ್ದಲ್ಲದೆ, ಅಫ್ಘಾನ್ ಎ ತಂಡದ ವಿರುದ್ದ ತ್ರಿದಿನ ಪಂದ್ಯದ ವೇಳೆ 42 ರನ್ಗೆ ಆರು ವಿಕೆಟ್ ಗಳನ್ನು ಉರುಳಿಸಿ ಗಮನ ಸೆಳೆದಿದ್ದರು.
ಇತ್ತೀಚೆಗೆ ಮುಂದಿನ ವರ್ಷ ನಡೆಯುವ ಐಪಿಎಲ್ ಟೂರ್ನಿಗೆ ತಾನು ಲಭ್ಯವಿಲ್ಲ ಎಂದು ಘೋಷಿಸಿದ್ದ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ಟೆಸ್ಟ್ ಸರಣಿಯು ಜನವರಿ 25ರಿಂದ ಹೈದರಾಬಾದ್ನಲ್ಲಿ ಆರಂಭವಾಗಲಿದೆ. ಇಂಗ್ಲೆಂಡ್ ತಂಡ ಪೂರ್ವತಯಾರಿ ಶಿಬಿರಕ್ಕಾಗಿ ಜನವರಿ ಮಧ್ಯಭಾಗದಲ್ಲಿ ಯುಎಇಗೆ ಪ್ರಯಾಣಿಸಲಿದ್ದು, ಮೊದಲ ಟೆಸ್ಟ್ ಪಂದ್ಯ ಆರಂಭಕ್ಕೆ ಮೊದಲು ಭಾರತಕ್ಕೆ ಆಗಮಿಸಲಿದೆ.
ಇಂಗ್ಲೆಂಡ್ ಟೆಸ್ಟ್ ತಂಡ
ಬೆನ್ ಸ್ಟೋಕ್ಸ್(ನಾಯಕ), ರೆಹಾನ್ ಅಹ್ಮದ್, ಜೇಮ್ಸ್ ಆ್ಯಂಡರ್ಸನ್, ಗಸ್ ಅಟ್ಕಿನ್ಸನ್, ಜಾನಿ ಬೈರ್ಸ್ಟೋವ್(ವಿಕೆಟ್ಕೀಪರ್), ಶುಐಬ್ ಬಶೀರ್, ಹ್ಯಾರಿ ಬ್ರೂಕ್, ಝಾಕ್ ಕ್ರಾವ್ಲೆ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜಾಕ್ ಲೀಚ್, ಒಲಿ ಪೋಪ್, ಒಲಿ ರಾಬಿನ್ಸನ್, ಜೋ ರೂಟ್, ಮಾರ್ಕ್ ವುಡ್.
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ
ಮೊದಲ ಟೆಸ್ಟ್: ಜನವರಿ 25-29, ಹೈದರಾಬಾದ್
ಎರಡನೇ ಟೆಸ್ಟ್: ಫೆಬ್ರವರಿ 2-6, ವಿಶಾಖಪಟ್ಟಣಂ
ಮೂರನೇ ಟೆಸ್ಟ್:ಫೆಬ್ರವರಿ 15-19, ರಾಜ್ಕೋಟ್
ನಾಲ್ಕನೇ ಟೆಸ್ಟ್: ಫೆಬ್ರವರಿ 23-27, ರಾಂಚಿ
ಐದನೇ ಟೆಸ್ಟ್: ಮಾರ್ಚ್ 7-11, ಧರ್ಮಶಾಲಾ







