England ನ ಮಾಜಿ ಟೆಸ್ಟ್ ನಾಯಕ ಮೈಕ್ ಸ್ಮಿತ್ ನಿಧನ

ಮೈಕ್ ಸ್ಮಿತ್
ಲಂಡನ್, ಮೇ 18: ಇಂಗ್ಲೆಂಡ್ನ ಮಾಜಿ ಟೆಸ್ಟ್ ನಾಯಕ ಮೈಕ್ ಸ್ಮಿತ್ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಸ್ಮಿತ್ ಅವರ ಮಾಜಿ ಕೌಂಟಿ ತಂಡ ವಾರ್ವಿಕ್ ಶೈರ್ ಸೋಮವಾರ ಘೋಷಿಸಿದೆ.
ಎಂಜೆಕೆ ಎಂದೇ ಖ್ಯಾತಿ ಪಡೆದಿರುವ ಸ್ಮಿತ್ ಇಂಗ್ಲೆಂಡ್ ತಂಡದ ಪರವಾಗಿ 50 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 25 ಪಂದ್ಯಗಳಲ್ಲಿ ತಂಡದ ನಾಯಕತ್ವವಹಿಸಿದ್ದಾರೆ. ರಗ್ಬಿಯಲ್ಲಿ ತೊಡಗಿಸಿಕೊಂಡಿದ್ದ ಸ್ಮಿತ್ 1956ರಲ್ಲಿ ವೇಲ್ಸ್ ವಿರುದ್ಧ ಒಂದು ಪಂದ್ಯ ಆಡಿದ್ದರು.
1958ರಲ್ಲಿ ನ್ಯೂಝಿಲ್ಯಾಂಡ್ ತಂಡದ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು. 1972ರಲ್ಲಿ ಆಸ್ಟ್ರೇಲಿಯದ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 72 ಶತಕಗಳ ಸಹಿತ ಸುಮಾರು 40,000ಕ್ಕೂ ಅಧಿಕ ರನ್ ಗಳಿಸಿದ್ದಾರೆ.
ಸ್ಮಿತ್ ಅವರು 1991 ಹಾಗೂ 2003ರ ನಡುವೆ ವಾರ್ವಿಕ್ಶೈರ್ ಕ್ರಿಕೆಟ್ ಕ್ಲಬ್ನ ಚೇರ್ಮನ್ ಆಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಕ್ಲಬ್ ಹಲವು ಟ್ರೋಫಿಗಳನ್ನು ಜಯಿಸಿತ್ತು. ಅವರ ಪುತ್ರ ನೀಲ್ ಸ್ಮಿತ್ ತಂಡದ ಪ್ರಮುಖ ಸದಸ್ಯರಾಗಿದ್ದರು.
‘‘ಬೀಯರ್ಸ್ ಲೆಜೆಂಡ್ ಎಂಜೆಕೆ ಸ್ಮಿತ್ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿಯನ್ನು ಪ್ರಕಟಿಸಲು ವಾರ್ವಿಕ್ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ವಿಷಾದಿಸುತ್ತಿದೆ’’ ಎಂದು ವಾರ್ವಿಕ್ಶೈರ್ ಕ್ಲಬ್ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದೆ.






