FIFA 2026: ಸೆನೆಗಲ್ ವಿರುದ್ಧ ನಾರ್ವೆ ತಂಡಕ್ಕೆ 3-2 ಅಂತರದ ಗೆಲುವು

Photo credit: X/@FIFAWorldCup
ನ್ಯೂಜೆರ್ಸಿ: ದ್ವಿತೀಯಾರ್ಧದಲ್ಲಿ ಅರ್ಲಿಂಗ್ ಹಾಲೆಂಡ್ ಬಾರಿಸಿದ ಎರಡು ಗೋಲುಗಳ ನೆರವಿನಿಂದ ನಾರ್ವೆ ತಂಡವು ಸೆನೆಗಲ್ ತಂಡದ ವಿರುದ್ಧ 3-2 ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಸೆನೆಗಲ್ ತಂಡವು ನಾಕೌಟ್ ಪ್ರವೇಶಿಸಲು ಐ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಇರಾಕ್ ವಿರುದ್ಧ ಭರ್ಜರಿ ಜಯ ದಾಖಲಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಮಳೆ ಸುರಿಯುತ್ತಿದ್ದ ರೋಚಕ ಪಂದ್ಯದಲ್ಲಿ, ಮಾರ್ಕಸ್ ಹೊಲ್ಮ್ಗ್ರೆನ್ ಪೆಡರ್ಸನ್ ಮೊದಲ ಗೋಲು ಗಳಿಸಿ ನಾರ್ವೆ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ದ್ವಿತೀಯಾರ್ಧದ 48ನೇ ನಿಮಿಷದಲ್ಲಿ ಅರ್ಲಿಂಗ್ ಹಾಲೆಂಡ್ ಎರಡನೇ ಗೋಲು ಮೂಲಕ ಮುನ್ನಡೆಯನ್ನು ಹಿಗ್ಗಿಸಿದರು. ಈ ಹಂತದಲ್ಲಿ ಸೆನೆಗಲ್ ಪರ ಇಸ್ಮಾಯಿಲಾ ಸರ್ರ್ 53ನೇ ನಿಮಿಷದಲ್ಲಿ ಗೋಲು ಗಳಿಸಿ ಮರುಹೋರಾಟಕ್ಕೆ ಬಲ ತಂದುಕೊಟ್ಟರು . ಆದರೆ ಅರ್ಲಿಂಗ್ ಹಾಲೆಂಡ್ ಕೆಲವೇ ನಿಮಿಷಗಳಲ್ಲಿ ಮತ್ತೊಂದು ಗೋಲು ಗಳಿಸಿ ಸೆನೆಗಲ್ ಮೇಲೆ ಒತ್ತಡ ಹೇರಿದರು. ಆದರೂ ಪಟ್ಟು ಬಿಡದ ಸೆನೆಗಲ್ ಪ್ರತಿ ಹೋರಾಟ ನಡೆಸುತ್ತಲೇ ಇತ್ತು. ಕೊನೆಗೆ 93ನೇ ನಿಮಿಷದಲ್ಲಿ ಇಸ್ಮಾಯಿಲಾ ಸರ್ರ್ ಚಾಕಚಕ್ಯತೆಯ ಗೋಲು ಗಳಿಸಿ ಪಂದ್ಯವನ್ನು ಉಳಿಸಲು ಶತಪ್ರಯತ್ನ ನಡೆಸಿದರು.
ಆದರೆ ರೆಫರಿ ಆಟವನ್ನು ಕೊನೆಗೊಳಿಸಿದಾಗ ಸೋಲಿನ ನಿರಾಶೆಯೊಂದಿಗೆ ಮೈದಾನದಿಂದ ಹೊರಹೋಗಲೇ ಬೇಕಾಯಿತು.
ತೀವ್ರ ಹಣಾಹಣಿಯ ಈ ಪಂದ್ಯದಲ್ಲಿ ನಾರ್ವೆ ತಂಡವು 7 ನೇರ ಗುರಿಯೊಂದಿಗೆ 13 ಬಾರಿ ಗೋಲು ಪ್ರಯತ್ನ ನಡೆಸಿದರೆ, ಸೆನೆಗಲ್ ತಂಡವು 4 ನೇರ ಗುರಿಯೊಂದಿಗೆ 16 ಬಾರಿ ಗೋಲು ಪ್ರಯತ್ನ ನಡೆಸಿತು.
ಸ್ಟ್ರೈಕರ್ ಹಾಲೆಂಡ್ ತಮ್ಮ 52ನೇ ಅಂತರರಾಷ್ಟ್ರೀಯ ಪಂದ್ಯದಲ್ಲೇ ನಾರ್ವೆ ಪರ 59 ಗೋಲುಗಳನ್ನು ದಾಖಲಿಸಿದ್ದು , ತಮ್ಮ ದೇಶದ ಪರ ಆಡಿದ ಸತತ 12 ಅಧಿಕೃತ ಪಂದ್ಯಗಳಲ್ಲಿ ಗೋಲು ಗಳಿಸಿದ ಅಪರೂಪದ ದಾಖಲೆ ಬರೆದಿದ್ದಾರೆ.






