ಜೆಮಿಮಾ, ಹರ್ಮನ್ಪ್ರೀತ್, ಮಿಚೆಲ್ ಸ್ಟಾರ್ಕ್, ಕುಲದೀಪ್ಗೆ ESPNcricinfo ಪ್ರಶಸ್ತಿ

Photo Credit : @icc
ಹೊಸದಿಲ್ಲಿ, ಮಾ.12: 2025ರ ಸಾಲಿನ ಇಎಸ್ಪಿಎನ್ಕ್ರಿಕ್ಇನ್ಫೋ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹಿಳೆಯರ ಎಲ್ಲ ವೈಯಕ್ತಿಕ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿರುವ ಭಾರತದ ಆಟಗಾರ್ತಿಯರು ಕ್ಲೀನ್ಸ್ವೀಪ್ ಸಾಧಿಸಿದ್ದಾರೆ.
ಏಕದಿನ ವಿಶ್ವಕಪ್ನಲ್ಲಿ ಆಕರ್ಷಕ ಶತಕ ಸಿಡಿಸಿ ಆಸ್ಟ್ರೇಲಿಯವನ್ನು ಟೂರ್ನಿಯಿಂದ ಹೊರಗಟ್ಟಿದ್ದ ಜೆಮಿಮಾ ರೋಡ್ರಿಗ್ಸ್ ಅವರು ಮಹಿಳೆಯರ ಏಕದಿನ ಬ್ಯಾಟಿಂಗ್ ಗೌರವಕ್ಕೆ ಪಾತ್ರರಾಗಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಫೈನಲ್ನಲ್ಲಿ ಐದು ವಿಕೆಟ್ ಗೊಂಚಲು ಪಡೆದಿದ್ದ ದೀಪ್ತಿ ಶರ್ಮಾ ಏಕದಿನ ಬೌಲಿಂಗ್ ಪ್ರಶಸ್ತಿ ಪಡೆದಿದ್ದಾರೆ.
ಮುಂಬೈ ಇಂಡಿಯನ್ಸ್ ಪರ ಎರಡನೇ ಬಾರಿ ಡಬ್ಲ್ಯುಪಿಎಲ್ ಪ್ರಶಸ್ತಿಯನ್ನು ಗೆದ್ದ ನಂತರ ಇಂಗ್ಲೆಂಡ್ನಲ್ಲಿ ಸೀಮಿತ ಓವರ್ಗಳ ಸರಣಿ(ಏಕದಿನ, ಟಿ-20)ಹಾಗೂ ವಿಶ್ವಕಪ್ ಪ್ರಶಸ್ತಿ ಗೆಲ್ಲಲು ತಂಡದ ನಾಯಕತ್ವ ವಹಿಸಿದ್ದ ಹರ್ಮನ್ಪ್ರೀತ್ ಕೌರ್ ಶ್ರೇಷ್ಠ ನಾಯಕಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಡಬ್ಲ್ಯುಪಿಎಲ್ ಫೈನಲ್ನಲ್ಲಿ 66 ರನ್ ಗಳಿಸಿ ಪ್ರಶಸ್ತಿ ಗೆಲುವಿಗೆ ನೆರವಾಗಿದ್ದ ಹರ್ಮನ್ಪ್ರೀತ್ ಮಹಿಳೆಯರ ಟಿ-20 ಲೀಗ್ ಬ್ಯಾಟಿಂಗ್ ಅವಾರ್ಡ್ ಪಡೆದಿದ್ದಾರೆ.
ಲಾರ್ಡ್ಸ್ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು ಐದು ವಿಕೆಟ್ಗಳ ಅಂತರದಿಂದ ಮಣಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದಿದ್ದ ದಕ್ಷಿಣ ಆಫ್ರಿಕಾ ತಂಡದ ಸಾಧನೆಯನ್ನು ಗುರುತಿಸಲಾಗಿದೆ. ಫೈನಲ್ ಪಂದ್ಯದ ನಾಲ್ಕನೇ ಇನಿಂಗ್ಸ್ನಲ್ಲಿ ಶತಕ ಗಳಿಸಿದ್ದ ಮರ್ಕ್ರಮ್ ಟೆಸ್ಟ್ ಬ್ಯಾಟಿಂಗ್ ಪ್ರಶಸ್ತಿ ನೀಡಲಾಗಿದೆ. ರನ್ ಚೇಸ್ ವೇಳೆ ಗಾಯದ ಸಮಸ್ಯೆಯ ನಡುವೆಯೂ 66 ರನ್ ಗಳಿಸಿದ್ದ ಟೆಂಬಾ ಬವುಮಾ ವರ್ಷದ ನಾಯಕ ಪ್ರಶಸ್ತಿ ಪಡೆದಿದ್ದಾರೆ.
ಭಾರತದಲ್ಲಿ 2-0 ಅಂತರದಿಂದ ಟೆಸ್ಟ್ ಸರಣಿಯನ್ನು ಗೆಲ್ಲಲು ಕಾರಣೀಕರ್ತರಾಗಿದ್ದ ವೇಗದ ಬೌಲರ್ ಮಾರ್ಕೊ ಜಾನ್ಸನ್ ಸ್ವಲ್ಪದರಲ್ಲಿ ಟೆಸ್ಟ್ ಬೌಲಿಂಗ್ ಪ್ರಶಸ್ತಿಯಿಂದ ವಂಚಿತರಾದರು. ಆ್ಯಶಸ್ ಟೆಸ್ಟ್ನ ಮೊದಲ ಪಂದ್ಯದಲ್ಲಿ 58 ರನ್ಗೆ ಏಳು ವಿಕೆಟ್ಗಳನ್ನು ಉರುಳಿಸಿದ್ದ ಮಿಚೆಲ್ ಸ್ಟಾರ್ಕ್ ಈ ಪ್ರಶಸ್ತಿಗೆ ಭಾಜನರಾದರು.






