ಯುರೋ ಚಾಂಪಿಯನ್ ಶಿಪ್: ನೆದರ್ಲ್ಯಾಂಡ್ಸ್ ವಿರುದ್ಧ 2-1 ಗೋಲುಗಳ ಜಯ ಸಾಧಿಸಿದ ಇಂಗ್ಲೆಂಡ್
ಫೈನಲ್ ನಲ್ಲಿ ಸ್ಪೇನ್ ಗೆ ಇಂಗ್ಲೆಂಡ್ ಸವಾಲು
Photo: x.com/WSM_AFCOfficial
ಕೊನೆ ಕ್ಷಣದಲ್ಲಿ ಬದಲಿ ಆಟಗಾರ ಒಲ್ಲೀ ವ್ಯಾಟ್ಕಿನ್ಸ್ ಗಳಿಸಿದ ಗೋಲಿನ ನೆರವಿನಿಂದ ನೆದರ್ಲೆಂಡ್ಸ್ ವಿರುದ್ಧ 2-1 ಗೋಲುಗಳ ಜಯ ಸಾಧಿಸಿದ ಇಂಗ್ಲೆಂಡ್ ತಂಡ ಯುಇಎಫ್ಎ 2024 ಟೂರ್ನಿಯ ಫೈನಲ್ ತಲುಪಿದೆ. ಪ್ರಶಸ್ತಿ ಸುತ್ತಿನಲ್ಲಿ ಇಂಗ್ಲೆಂಡ್ ತಂಡ ಸ್ಪೇನ್ ವಿರುದ್ಧ ಸೆಣೆಸಲಿದೆ.
ಡರ್ಟ್ಮಂಡ್ನಲ್ಲಿ ನಡೆದ ಸೆಮಿಫೈನಲ್ಸ್ನ ಏಳನೇ ನಿಮಿಷದಲ್ಲೇ ಗ್ಸಾವಿ ಸೈಮನ್ಸ್ ಗಳಿಸಿದ ಅದ್ಭುತ ಗೋಲಿನಿಂದ ಡಚ್ಚರು ಇಂಗ್ಲೆಂಡ್ ವಿರುದ್ಧ ಆರಂಭಿಕ ಮುನ್ನಡೆ ಸಾಧಿಸಿದರು. ಆದರೆ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಕೆಲವೇ ಕ್ಷಣಗಳಲ್ಲಿ ಸಮಬಲ ಸಾಧಿಸಿದರು. ಇನ್ನೇನು ಪಂದ್ಯದ ಅವಧಿ ವಿಸ್ತರಿಸಬೇಕಾಗುತ್ತದೆ ಎಂಬ ಹಂತದಲ್ಲಿ ವ್ಯಾಟ್ಕಿನ್ಸ್ 91ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಇಂಗ್ಲೆಂಡ್ ಗೆಲುವು ಕಸಿದುಕೊಂಡಿತು.
ಕೊನೆ ಕ್ಷಣದಲ್ಲಿ ಕೋಲ್ ಪಾಲ್ಮರ್ ಅವರ ಉತ್ತಮ ಪಾಸ್ ಅನ್ನು ಸೆಳೆದುಕೊಂಡ ವಾಟ್ಕಿನ್ಸ್ ಅದ್ಭುತವಾಗಿ ನೆಟ್ ಸೇರಿಸುವ ಮೂಲಕ ಇಂಗ್ಲೆಂಡ್ ಅಭಿಮಾನಿಗಳ ಪಾಲಿಗೆ ವಿಜಯದ ರೂವಾರಿ ಎನಿಸಿದರು. ಪಂದ್ಯದಲ್ಲಿ ಇಂಗ್ಲೆಂಡ್ ಸಮಬಲ ಸಾಧಿಸಲು ಗೋಲು ಗಳಿಸಿದ ಹ್ಯಾರಿ ಕೇನ್ ಬದಲು ವ್ಯಾಟ್ಕಿನ್ಸ್ ಮೈದಾನಕ್ಕೆ ಇಳಿದಿದ್ದರು. ಇದು ಕೋಚ್ ಗ್ಯಾರೆತ್ ಸೌತ್ಗೇಟ್ ಅವರ ಉತ್ತಮ ನಿರ್ಧಾರ ಎನಿಸಿತು.
ಇದಕ್ಕೂ ಮುನ್ನ ಮಂಗಳವಾರ ನಡೆದ ಮೊದಲ ಸೆಮಿಫೈನಲ್ನಲ್ಲಿ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ಅಮೋಘ ಪ್ರದರ್ಶನ ನೀಡಿದ ಸ್ಪೇನ್ ತಂಡ ಫ್ರಾನ್ಸ್ ವಿರುದ್ಧ 2-1 ಅಂತರದ ಜಯ ಸಾಧಿಸಿ ಫೈನಲ್ಗೆ ಮುನ್ನಡೆದಿತ್ತು. ಇದು ಕಳೆದ 12 ವರ್ಷಗಳಲ್ಲಿ ಪ್ರಮುಖ ಟೂರ್ನಿಗಳ ಪೈಕಿ ಸ್ಪೇನ್ ತಂಡದ ಮೊಟ್ಟಮೊದಲ ಫೈನಲ್ ಆಗಿದೆ.