ಯುರೋಪ್ ಹಾಕಿ ಪ್ರವಾಸ ಬೆಲ್ಜಿಯಂ ವಿರುದ್ಧ ಸೋತ ಭಾರತ ‘ಎ’ ತಂಡ

PC : X
ಆಂಟ್ವೆರ್ಪೆನ್, ಜು.18: ಯುರೋಪ್ ಪ್ರವಾಸದಲ್ಲಿರುವ ಭಾರತ ‘ಎ’ ಪುರುಷರ ಹಾಕಿ ತಂಡವು ಗುರುವಾರ ಆತಿಥೇಯ ಬೆಲ್ಜಿಯಂ ತಂಡದ ವಿರುದ್ಧ 1-3 ಗೋಲುಗಳ ಅಂತರದಿಂದ ಸೋಲುಂಡಿದೆ.
ಭಾರತ ‘ಎ’ ತಂಡದ ಪರ ನಾಯಕ ಸಂಜಯ್ ಏಕೈಕ ಗೋಲು ಗಳಿಸಿದರು. ಬೆಲ್ಜಿಯಂ ತಂಡವು ಮೊದಲ ಕ್ವಾರ್ಟರ್ ನಲ್ಲಿ ತನ್ನ ಎಲ್ಲ 3 ಗೋಲುಗಳನ್ನು ಗಳಿಸಿದೆ.
ಭಾರತವು ಕೊನೆಯ 3 ಕ್ವಾರ್ಟರ್ ಗಳಲ್ಲಿ ಒತ್ತಡವನ್ನು ತಡೆದುಕೊಳ್ಳುವ ಜೊತೆಗೆ ಅವಕಾಶಗಳನ್ನು ಸೃಷ್ಟಿಸಿಕೊಂಡಿತು. ಹೀಗಾಗಿ ಕೊನೆಯ ಕ್ವಾರ್ಟರ್ ನಲ್ಲಿ ಗೋಲು ಗಳಿಸುವಲ್ಲಿ ಶಕ್ತವಾಯಿತು.
‘‘ಕಳಪೆ ಆರಂಭ ಪಡೆದ ಹೊರತಾಗಿಯೂ ಪಂದ್ಯದಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ನಾವು ಆರಂಭದಲ್ಲೇ ಗೋಲು ಬಿಟ್ಟುಕೊಟ್ಟೆವು. ಪುಟಿದೇಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾದೆವು. ದ್ವಿತೀಯಾರ್ಧದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದೆವು. ನಾವು ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಿದ್ದೆವು. ಫಿನಿಶಿಂಗ್ ನತ್ತ ನಾವು ಗಮನ ನೀಡುವ ಅಗತ್ಯವಿದೆ’’ ಎಂದು ಭಾರತ ‘ಎ’ ತಂಡದ ಕೋಚ್ ಶಿವೇಂದ್ರ ಸಿಂಗ್ ಹೇಳಿದ್ದಾರೆ.
‘‘ನಮ್ಮ ಯುವ ಆಟಗಾರರ ಮೇಲೆ ಸಾಕಷ್ಟು ಒತ್ತಡವಿತ್ತು. ಎಲ್ಲರೂ ವಿಶ್ವ ಶ್ರೇಷ್ಠತಂಡಗಳು ಹಾಗೂ ಆಟಗಾರರನ್ನು ಎದುರಿಸಿದ್ದಾರೆ. ಹುಡುಗರು ಭಾರೀ ಆತ್ಮವಿಶ್ವಾಸದೊಂದಿಗೆ ಆಡಿದ್ದಾರೆ. ಯುರೋಪ್ ಪ್ರವಾಸವು ಈ ಯುವ ಆಟಗಾರರ ಬೆಳವಣಿಗೆಗೆ ಪೂರಕವಾಗಿದೆ. ನಾವು ವಿಶ್ವದ ನಂ.1 ನೆದರ್ ಲ್ಯಾಂಡ್ಸ್ ತಂಡವನ್ನು ಎದುರಿಸಲಿದ್ದೇವೆ’’ಎಂದು ಸಿಂಗ್ ಹೇಳಿದ್ದಾರೆ.
ಭಾರತ ‘ಎ’ ತಂಡವು ಜುಲೈ 18 ಹಾಗೂ 20ರಂದು ನೆದರ್ ಲ್ಯಾಂಡ್ಸ್ ತಂಡದ ವಿರುದ್ಧ 2 ಪಂದ್ಯಗಳನ್ನು ಆಡಲಿದೆ.





