ಇರಾನ್ ವಿರುದ್ಧ ರೋಚಕ ಜಯ ; ಏಶ್ಯನ್ ಕಪ್ ಫೈನಲ್ ಗೆ ಲಗ್ಗೆ ಇಟ್ಟ ಖತರ್

Photo: NDTV
ದೋಹಾ : ಆತಿಥೇಯ ತಂಡ ಹಾಗೂ ಹಾಲಿ ಚಾಂಪಿಯನ್ ಖತರ್ ಬುಧವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಇರಾನ್ ತಂಡದ ವಿರುದ್ಧ 3-2 ಗೋಲುಗಳ ಅಂತರದಿಂದ ರೋಚಕ ಜಯ ಸಾಧಿಸಿದೆ. ಈ ಮೂಲಕ ಏಶ್ಯನ್ ಕಪ್ ಫೈನಲ್ಗೆ ಲಗ್ಗೆ ಇಟ್ಟಿದ್ದು, ಶನಿವಾರ ಲುಸೈಲ್ ಸ್ಟೇಡಿಯಮ್ನಲ್ಲಿ ಜೋರ್ಡನ್ ತಂಡವನ್ನು ಎದುರಿಸಲಿದೆ.
ಖತರ್ ಏಶ್ಯನ್ ಕಪ್ನಲ್ಲಿ ಸತತ ಎರಡನೇ ಬಾರಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಈ ಸಾಧನೆಯು 2022ರಲ್ಲಿ ತನ್ನ ಆತಿಥ್ಯದಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಬೇಗನೆ ನಿರ್ಗಮಿಸಿರುವ ಕಹಿ ನೆನಪನ್ನು ಮರೆಯಲು ನೆರವಾಗಿದೆ.
40,000ಕ್ಕೂ ಅಧಿಕ ಫುಟ್ಬಾಲ್ ಬೆಂಬಲಿಗರ ಸಮ್ಮುಖದಲ್ಲಿ ಖತರ್ ತನ್ನ ಪ್ರತಿರೋಧ ಹಾಗೂ ಬದ್ದತೆಯನ್ನು ಪ್ರದರ್ಶಿಸಿತು.
ವರ್ಷದ ಹಿಂದೆ ತವರು ನೆಲದಲ್ಲಿ ನಡೆದಿದ್ದ ಫಿಫಾ ವಿಶ್ವಕಪ್ನಲ್ಲಿ ಖತರ್ ಎಲ್ಲ ಮೂರು ಪಂದ್ಯಗಳನ್ನು ಸೋತಿತ್ತು. ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಆತಿಥೇಯ ತಂಡವೊಂದರ ಕಳಪೆ ಪ್ರದರ್ಶನ ಇದಾಗಿತ್ತು.
ಮ್ಯಾಚ್ ವಿನ್ನರ್ ಅಲ್ಮೋಝ್ ಅಲಿ ಏಶ್ಯನ್ ಕಪ್ನಲ್ಲಿ ದಾಖಲೆ 9ನೇ ಗೋಲು ಗಳಿಸಿ 2019ರಲ್ಲಿ ಖತರ್ ಮೊದಲ ಬಾರಿ ಪ್ರಶಸ್ತಿ ಗೆಲ್ಲಲು ನೆರವಾಗಿದ್ದರು. ಆದರೆ ಈ ವರ್ಷದ ಟೂರ್ನಮೆಂಟ್ನಲ್ಲಿ ಸೆಮಿ ಫೈನಲ್ನಲ್ಲಿ ಕೇವಲ ಒಂದು ಗೋಲು ಗಳಿಸಿದ್ದಾರೆ.
82ನೇ ನಿಮಿಷದಲ್ಲಿ ಅಲಿ ಗಳಿಸಿದ ಗೋಲಿನ ನೆರವಿನಿಂದ ರೋಚಕ ಜಯ ದಾಖಲಿಸಿದ ಖತರ್ 1976ರ ನಂತರ ಮೊದಲ ಬಾರಿ ಏಶ್ಯನ್ ಕಪ್ ಪ್ರಶಸ್ತಿ ಗೆಲ್ಲುವ ಇರಾನ್ ಕನಸನ್ನು ನುಚ್ಚುನೂರು ಮಾಡಿತು.
ಇರಾನ್ 4ನೇ ನಿಮಿಷದಲ್ಲಿ 1-0 ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಯಿತು. ಖತರ್ 17ನೇ ನಿಮಿಷದಲ್ಲಿ ಗೋಲನ್ನು ಸಮಬಲಗೊಳಿಸಿತು. ಮೊದಲಾರ್ಧಕ್ಕಿಂತ ಮೊದಲು ಅಕ್ರಂ ಅಫೀಫ್(43ನೇ ನಿಮಿಷ) ಟೂರ್ನಮೆಂಟ್ನಲ್ಲಿ ಐದನೇ ಗೋಲು ಗಳಿಸಿ ಖತರ್ಗೆ 2-1 ಮುನ್ನಡೆ ಒದಗಿಸಿಕೊಟ್ಟರು. ಆದರೆ ದ್ವಿತೀಯಾರ್ಧದ 51ನೇ ನಿಮಿಷದಲ್ಲಿ ಇರಾನ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ 2-2ರಿಂದ ಸಮಬಲ ಸಾಧಿಸಿತು.
ಅಲಿ ಕೊನೆಯ ಕ್ಷಣದಲ್ಲಿ ತೋರಿದ ವೀರೋಚಿತ ಪ್ರದರ್ಶನವು ಖತರ್ನ ರೋಚಕ ಗೆಲುವಿಗೆ ನೆರವಾಯಿತು. ಉಭಯ ತಂಡಗಳು ಫೈನಲ್ನಲ್ಲಿ ಸ್ಥಾನ ಪಡೆಯಲು ತೀವ್ರ ಪೈಪೋಟಿ ನಡೆಸಿದವು. ಅಂತಿಮವಾಗಿ ಖತರ್ ತನ್ನ ಕೊರಳಿಗೆ ಗೆಲುವಿನ ಹಾರ ಹಾಕಿಕೊಂಡಿತು.
ಮಂಗಳವಾರ ನಡೆದಿದ್ದ ಮತ್ತೊಂದು ಸೆಮಿ ಫೈನಲ್ನಲ್ಲಿ ದಕ್ಷಿಣ ಕೊರಿಯಾವನ್ನು 2-0 ಗೋಲುಗಳ ಅಂತರದಿಂದ ಮಣಿಸಿ ಶಾಕ್ ನೀಡಿದ್ದ ಜೋರ್ಡನ್ ಏಶ್ಯನ್ ಕಪ್ ಟೂರ್ನಿಯಲ್ಲಿ ಫೈನಲ್ಗೆ ತಲುಪಿತ್ತು. ಜೋರ್ಡನ್ 53ನೇ ಹಾಗೂ 66ನೇ ನಿಮಿಷದಲ್ಲಿ ಗೋಲು ಗಳಿಸಿ ಐತಿಹಾಸಿಕ ಗೆಲುವು ದಾಖಲಿಸಿತು.







