ಡೋಪಿಂಗ್ ಪರೀಕ್ಷೆಯಲ್ಲಿ ವಿಫಲ: ಭಾರತದ ಓಟಗಾರ್ತಿ ದ್ಯುತಿ ಚಂದ್ ಗೆ ನಾಲ್ಕು ವರ್ಷ ನಿಷೇಧ

Photo: Twitter (@DuteeChand)
ಹೊಸದಿಲ್ಲಿ: ಭಾರತದ ಓಟಗಾರ್ತಿ ದ್ಯುತಿ ಚಂದ್ ಡೋಪಿಂಗ್ ಪರೀಕ್ಷೆಯಲ್ಲಿ ಅನುತೀರ್ಣರಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ(ನಾಡಾ) ನಾಲ್ಕು ವರ್ಷಗಳ ಕಾಲ ನಿಷೇಧ ವಿಧಿಸಿದೆ. ಏಶ್ಯನ್ ಗೇಮ್ಸ್ ನಲ್ಲಿ 2 ಬಾರಿ ಬೆಳ್ಳಿ ಪದಕ ವಿಜೇತೆ ಚಂದ್ ನಿಷೇಧ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ದ್ಯುತಿ ಚಂದ್ ಅವರಿಂದ ಸಂಗ್ರಹಿಸಲಾಗಿದ್ದ ಎರಡು ಮಾದರಿಗಳಲ್ಲಿ "ಅದರ್ ಅನಾಬೋಲಿಕ್ ಏಜೆಂಟ್ ಗಳು /SARMS" ಇರುವುದು ಕಂಡುಬಂದ ಹಿನ್ನೆಲೆಯಲ್ಲಿ 100 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ 27 ರ ವಯಸ್ಸಿನ ಚಂದ್ ವಿರುದ್ಧ ಗುರುವಾರ ನಿಷೇಧವನ್ನು ವಿಧಿಸಲಾಗಿದೆ,
ಚಂದ್ ಅವರ ನಿಷೇಧದ ಅವಧಿಯು ಜನವರಿ 3, 2023 ರಿಂದ ಜಾರಿಗೆ ಬರಲಿದೆ.
"ಡಿಸೆಂಬರ್ 5, 2022 ರಂದು ತನ್ನ ಮಾದರಿ ಸಂಗ್ರಹಣೆಯ ದಿನಾಂಕದಿಂದ ಕ್ರೀಡಾಪಟುವು ಪಡೆದ ಎಲ್ಲಾ ಸ್ಪರ್ಧಾತ್ಮಕ ಫಲಿತಾಂಶಗಳು, ಪದಕಗಳು, ಅಂಕಗಳು ಮತ್ತು ಬಹುಮಾನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸೇರಿದಂತೆ ಎಲ್ಲಾ ಫಲಿತಾಂಶಗಳಿಂದ ಅನರ್ಹಗೊಳಿಸಲಾಗುತ್ತದೆ" ಎಂದು ಡೋಪಿಂಗ್ ವಿರೋಧಿ ಶಿಸ್ತಿನ ಸಮಿತಿ (ADDP), ಅದರ ಅಧ್ಯಕ್ಷ ಚೈತನ್ಯ ಮಹಾಜನ್ ನೇತೃತ್ವದ, ಗುರುವಾರ ಅಂಗೀಕರಿಸಿದ ತನ್ನ ಆದೇಶದಲ್ಲಿ ತಿಳಿಸಿದೆ.
ದ್ಯುತಿ ಚಂದ್ 2018ರಲ್ಲಿ ಜಕಾರ್ತದಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್ ನಲ್ಲಿ 100 ಮೀ. ಹಾಗೂ 200 ಮೀ. ಓಟಗಳಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ನಾಡಾದ ಡೋಪ್ ನಿಯಂತ್ರಣಾಧಿಕಾರಿಗಳು ಭುವನೇಶ್ವರದಲ್ಲಿ ಡಿ.5 ಹಾಗೂ 26ರಂದು ಎರಡು ಬಾರಿ ಪರೀಕ್ಷೆ ನಡೆಸಿದ್ದರು.







