ʼನಕಲಿ' ಪಾಕಿಸ್ತಾನ ಫುಟ್ಬಾಲ್ ತಂಡ ಜಪಾನ್ನಿಂದ ಗಡೀಪಾರು!

Credit: X/@MeghUpdates
ಲಾಹೋರ್ : ಜಪಾನಿಗೆ ಹೋದ ನಕಲಿ ಪಾಕಿಸ್ತಾನ ಫುಟ್ಬಾಲ್ ತಂಡವನ್ನು ವಂಚನೆ ಬಹಿರಂಗಗೊಂಡ ಬಳಿಕ ಗಡೀಪಾರು ಮಾಡಲಾಗಿದೆ ಎಂದು ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆ (FIA) ತಿಳಿಸಿದೆ.
22 ಸದಸ್ಯರ ನಕಲಿ ಫುಟ್ಬಾಲ್ ತಂಡವನ್ನು ಜಪಾನ್ಗೆ ಕಳುಹಿಸುವಲ್ಲಿ ಮಾನವ ಕಳ್ಳಸಾಗಣೆ ಜಾಲ ಭಾಗಿಯಾಗಿದೆ ಎಂದು ಎಫ್ಐಎ ಹೇಳಿಕೆಯಲ್ಲಿ ತಿಳಿಸಿದೆ.
ನಕಲಿ ಆಟಗಾರರು ಫುಟ್ಬಾಲ್ ಆಟಗಾರರಂತೆ ವಸ್ತ್ರವನ್ನು ಧರಿಸಿದ್ದರು ಮತ್ತು ಪಾಕಿಸ್ತಾನ ಫುಟ್ಬಾಲ್ ಫೆಡರೇಶನ್ನಲ್ಲಿ ನೋಂದಾಯಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದರು. ಅವರು ಜಪಾನಿನ ಕ್ಲಬ್ನೊಂದಿಗೆ ಪಂದ್ಯಗಳನ್ನು ನಿಗದಿಪಡಿಸಿರುವುದಾಗಿಯೂ ಹೇಳಿಕೊಂಡಿದ್ದರು.
15 ದಿನಗಳ ವೀಸಾ ಪಡೆಯುವಲ್ಲಿ ಯಶಸ್ವಿಯಾದ 22 ಸದಸ್ಯರ ನಕಲಿ ಫುಟ್ಬಾಲ್ ತಂಡವು ಜೂನ್ 2025ರಲ್ಲಿ ಜಪಾನ್ ತಲುಪಿತು. ಆದರೆ, ಜಪಾನಿನ ಅಧಿಕಾರಿಗಳು ವಿಮಾನ ನಿಲ್ದಾಣದಿಂದ ತಂಡವನ್ನು ಗಡೀಪಾರು ಮಾಡಿದ್ದಾರೆ ಮತ್ತು ನಂತರ ಈ ಬಗ್ಗೆ ಎಫ್ಐಎಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ತನಿಖಾ ನಡೆಸುತ್ತಿರುವ ತನಿಖಾ ಸಂಸ್ಥೆ ಮಾನವ ಕಳ್ಳಸಾಗಣೆ ತಂಡದ ಸದಸ್ಯ ವಕಾಸ್ ಅಲಿ ಎಂಬಾತನನ್ನು ಬಂಧಿಸಿದೆ. ತನಿಖೆಯ ಸಮಯದಲ್ಲಿ ವಕಾಸ್ ಅಲಿ ಪಾಕಿಸ್ತಾನ ಪುಟ್ಬಾಲ್ ತಂಡದ ಸದಸ್ಯರೆಂದು ಸುಳ್ಳು ಹೇಳಿಕೊಂಡು 2024ರಲ್ಲಿ 17 ಜನರನ್ನು ಜಪಾನ್ಗೆ ಕಳುಹಿಸಿದ್ದಾನೆ ಎಂದು ಹೇಳಿದ್ದಾನೆ.







