3000 ರೂ ಪಾವತಿಸಿ 200 ಬಾರಿ ಟೋಲ್ ರಸ್ತೆಯಲ್ಲಿ ಪ್ರಯಾಣಿಸಿ; ಕೇಂದ್ರ ಸರ್ಕಾರದಿಂದ ಫಾಸ್ಟ್ ಟ್ಯಾಗ್ ವಾರ್ಷಿಕ ಪಾಸ್!

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಹೆದ್ದಾರಿಗಳಲ್ಲಿ ಸರಾಗ ಪ್ರಯಾಣಕ್ಕಾಗಿ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ನ್ನು ಪರಿಚಯಿಸುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಬುಧವಾರ ಪ್ರಕಟಿಸಿದೆ.
ವಾರ್ಷಿಕ ಪಾಸ್ಗೆ 3,000 ರೂ.ದರವನ್ನು ನಿಗದಿಗೊಳಿಸಲಾಗಿದ್ದು, 2025,ಆ.15ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಹೊಸ ಫಾಸ್ಟ್ಟ್ಯಾಗ್ ಪಾಸ್ ಕಾರು,ಜೀಪ್ ಮತ್ತು ವ್ಯಾನ್ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಅದನ್ನು ಪಡೆದುಕೊಂಡ ದಿನಾಂಕದಿಂದ ಒಂದು ವರ್ಷದವರೆಗೆ ಅಥವಾ 200 ಟ್ರಿಪ್ಗಳವರೆಗೆ,ಇವುಗಳಲ್ಲಿ ಯಾವುದು ಮೊದಲು ಬರುತ್ತದೆಯೋ ಅಲ್ಲಿಯವರೆಗೆ ಸಿಂಧುವಾಗಿರುತ್ತದೆ.
ಇದು ಟೋಲ್ಗೆ ಸಂಬಂಧಿಸಿದ ಕುಂದುಕೊರತೆಗಳನ್ನು,ವಿಶೇಷವಾಗಿ 60 ಕಿ.ಮೀ.ವ್ಯಾಪ್ತಿಯಲ್ಲಿನ ಟೋಲ್ ಪ್ಲಾಝಾಗಳ ಸಮೀಪದ ನಿವಾಸಿಗಳ,ನಿವಾರಿಸುವ ಗುರಿಯನ್ನುಹೊಂದಿದೆ.
ವಾರ್ಷಿಕ ಪಾಸ್ ಪಡೆಯುವುದು ಹೇಗೆ?
ವಾರ್ಷಿಕ ಪಾಸ್ ರಾಜಮಾರ್ಗ ಮೊಬೈಲ್ ಆ್ಯಪ್, ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ವೆಬ್ಸೈಟ್ಗಳ ಮೂಲಕ ಲಭ್ಯವಾಗಲಿದೆ.
ವಾರ್ಷಿಕ ಪಾಸ್ನ ಜಾರಿಗೆ ಮುನ್ನ ಅದನ್ನು ಸಕ್ರಿಯಗೊಳಿಸಲು ಮತ್ತು ನವೀಕರಿಸಲು ಮೀಸಲಾದ ಲಿಂಕ್ನ್ನು ಬಿಡುಗಡೆಗೊಳಿಸಲಾಗುವುದು.
ಗಡ್ಕರಿಯವರ ಪ್ರಕಾರ ನೂತನ ವ್ಯವಸ್ಥೆಯು ಇಡೀ ವರ್ಷಕ್ಕಾಗಿ ಒಂದು ಬಾರಿ ಹಣವನ್ನು ಪಾವತಿಸಲು ಬಳಕೆದಾರರಿಗೆ ಅವಕಾಶ ಕಲ್ಪಿಸುವ ಮೂಲಕ ಟೋಲ್ ಪಾವತಿಗಳನ್ನು ಸರಳಗೊಳಿಸಲು ಉದ್ದೇಶಿಸಿದೆ. ಕಡಿಮೆ ದೂರದ ಪ್ರಯಾಣಗಳ ಸಂದರ್ಭದಲ್ಲಿ ಆಗಾಗ ಟೋಲ್ ಕಡಿತ ಕುರಿತು ದೀರ್ಘಕಾಲಿಕ ಸಾರ್ವಜನಿಕ ಕಳವಳಗಳನ್ನೂ ಇದು ಪರಿಹರಿಸಲಿದೆ.
ಪ್ರವೇಶವನ್ನು ಪ್ರಮಾಣೀಕರಿಸುವ ಮತ್ತು ಪದೇಪದೇ ಟೋಲ್ ಪಾವತಿಗಳ ಅಗತ್ಯವನ್ನು ನಿವಾರಿಸುವ ಮೂಲಕ ವಾರ್ಷಿಕ ಪಾಸ್ ದಟ್ಟಣೆಯನ್ನು ಕಡಿಮೆಗೊಳಿಸುತ್ತದೆ,ಟೋಲ್ ಪ್ಲಾಝಾಗಳಲ್ಲಿ ವಿವಾದಗಳನ್ನು ತಗ್ಗಿಸುತ್ತದೆ ಮತ್ತು ಹೆದ್ದಾರಿ ಜಾಲಗಳಾದ್ಯಂತ ಖಾಸಗಿ ವಾಹನಗಳ ವೇಗದ ಸಂಚಾರವನ್ನು ಖಚಿತಪಡಿಸುತ್ತದೆ ಎಂದು ಸರಕಾರವು ನಿರೀಕ್ಷಿಸಿದೆ.
ರಾಷ್ಟ್ರೀಯ ಹೆದ್ದಾರಿ ಜಾಲದಲ್ಲಿ ಬಳಕೆದಾರರ ಅನುಕೂಲವನ್ನು ಹೆಚ್ಚಿಸುವ ಜೊತೆಗೆ ಮೂಲಸೌಕರ್ಯ ಸೇವೆಗಳನ್ನು ಡಿಜಿಟಲೀಕರಿಸುವ ಮತ್ತು ಆಧುನೀಕರಿಸುವ ವ್ಯಾಪಕ ಪ್ರಯತ್ನಗಳ ಭಾಗವಾಗಿ ಸರಕಾರವು ಈ ಉಪಕ್ರಮವನ್ನು ಕೈಗೊಂಡಿದೆ ಎಂದು ಸಚಿವಾಲಯವು ತಿಳಿಸಿದೆ.







