ಅಂಡರ್-19 ಯೂತ್ ಏಕದಿನ ಕ್ರಿಕೆಟ್ | ವೇಗದ ಶತಕ ಗಳಿಸಿ ಇತಿಹಾಸ ನಿರ್ಮಿಸಿದ ವೈಭವ್ ಸೂರ್ಯವಂಶಿ

Vaibhav_Suryavanshi (PC: X)
ಲಂಡನ್: ಇಂಗ್ಲೆಂಡ್ ಅಂಡರ್-19 ಕ್ರಿಕೆಟ್ ತಂಡದ ವಿರುದ್ಧ ಶನಿವಾರ ನಡೆದ 4ನೇ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ ಶತಕ ಸಿಡಿಸಿದ 14ರ ಹರೆಯದ ವೈಭವ್ ಸೂರ್ಯವಂಶಿ ಯೂತ್ ಏಕದಿನ ಕ್ರಿಕೆಟ್ ನಲ್ಲಿ ನೂತನ ದಾಖಲೆ ನಿರ್ಮಿಸಿದರು.
ಭಾರತದ ಅಂಡರ್-19 ತಂಡದ ಪರ ಆಡಿದ ವೈಭವ್ ಅತ್ಯಂತ ವೇಗವಾಗಿ ಮೂರಂಕೆಯ ಸ್ಕೋರ್ ಗಳಿಸಿ ಪಾಕಿಸ್ತಾನದ ಕಾಮ್ರಾನ್ ಗುಲಾಮ್ ಅವರ ದಾಖಲೆಯನ್ನು ಮುರಿದರು. ಗುಲಾಮ್ 2013ರಲ್ಲಿ ಅಂಡರ್-19 ಕ್ರಿಕೆಟ್ ನಲ್ಲಿ 53 ಎಸೆತಗಳಲ್ಲಿ ಶತಕ ಗಳಿಸಿದ್ದರು.
ಎಡಗೈ ಬ್ಯಾಟರ್ 10 ಬೌಂಡರಿ ಹಾಗೂ 7 ಸಿಕ್ಸರ್ಗಳ ಬಲದಿಂದ ಶತಕ ಪೂರೈಸಿದರು. ಅಂತಿಮವಾಗಿ 78 ಎಸೆತಗಳಲ್ಲಿ 13 ಬೌಂಡರಿ ಹಾಗೂ 10 ಸಿಕ್ಸರ್ಗಳ ಸಹಿತ 143 ರನ್ ಗಳಿಸಿ ಔಟಾದರು.
ವೈಭವ್ ಕಳೆದ ವರ್ಷ ಚೆನ್ನೈನಲ್ಲಿ ನಡೆದಿದ್ದ ಆಸ್ಟ್ರೇಲಿಯ ಅಂಡರ್-19 ತಂಡದ ವಿರುದ್ಧದ ಪುರುಷರ ಯೂತ್ ಟೆಸ್ಟ್ ಪಂದ್ಯದಲ್ಲಿ 2ನೇ ವೇಗದ ಶತಕ ಗಳಿಸಿದ್ದರು. ಆಗ ಅವರು ಕೇವಲ 56 ಎಸೆತಗಳಲ್ಲಿ ಮೂರಂಕೆ ದಾಟಿದ್ದರು. ಇಂಗ್ಲೆಂಡ್ ನ ಮೊಯಿನ್ ಅಲಿ (2005ರಲ್ಲಿ 56 ಎಸೆತಗಳಲ್ಲಿ ಶತಕ)ದಾಖಲೆಯನ್ನು ಸರಿಗಟ್ಟಿದ್ದರು.
ವೈಭವ್ ಈ ಸ್ಫೋಟಕ ಇನಿಂಗ್ಸ್ ನ ಮೂಲಕ ಯೂತ್ ಏಕದಿನ ಕ್ರಿಕೆಟ್ ನಲ್ಲಿ ಶತಕ ಗಳಿಸಿದ ಭಾರತದ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡರು. ಈ ಮೂಲಕ ಸರ್ಫರಾಝ್ ಖಾನ್ ಅವರ 12 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಸರ್ಫರಾಝ್ ಅವರು 2013ರಲ್ಲಿ ದಕ್ಷಿಣ ಆಫ್ರಿಕಾ ಅಂಡರ್-19 ತಂಡದ ವಿರುದ್ದ 15 ವರ್ಷ, 338 ದಿನಗಳ ವಯಸ್ಸಿನಲ್ಲಿ ಶತಕ ಗಳಿಸಿದ್ದರು.
ಯೂತ್ ಏಕದಿನ ಕ್ರಿಕೆಟ್ ನಲ್ಲಿ ಶತಕ ಗಳಿಸಿದ ವಿಶ್ವದ ಯುವ ಕ್ರಿಕೆಟಿಗನೆಂಬ ಕೀರ್ತಿಗೂ ವೈಭವ್ ಪಾತ್ರರಾದರು. ಇದರೊಂದಿಗೆ ಬಾಂಗ್ಲಾದೇಶದ ನಜ್ಮುಲ್ ಹುಸೈನ್ ಶಾಂಟೊ ಅವರ ದಾಖಲೆಯನ್ನು ಮುರಿದರು. ಶಾಂಟೊ2013ರಲ್ಲಿ 14 ವರ್ಷ, 241 ದಿನಗಳ ವಯಸ್ಸಿನಲ್ಲಿ 100 ರನ್ ಗಳಿಸಿದ್ದರು.
ಭಾರತದ ಪರ ರಾಜ್ ಅಂಗದ್ ಬಾವ 2022ರ ಅಂಡರ್-19 ವಿಶ್ವಕಪ್ ನಲ್ಲಿ ಉಗಾಂಡ ವಿರುದ್ಧ 69 ಎಸೆತಗಳಲ್ಲಿ ಶತಕ ಗಳಿಸಿದ್ದರು. ಇದೀಗ ವೈಭವ್ ಈ ದಾಖಲೆಯನ್ನೂ ಪುಡಿಗಟ್ಟಿದ್ದಾರೆ.
ಈಗ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಯೂತ್ ಏಕದಿನ ಸರಣಿಯಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ವೈಭವ್ 3ನೇ ಪಂದ್ಯದಲ್ಲಿ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಯೂತ್ ಏಕದಿನ ಕ್ರಿಕೆಟ್ ನಲ್ಲಿ ವೇಗವಾಗಿ ಅರ್ಧಶತಕ ಗಳಿಸಿದ ಭಾರತದ 2ನೇ ಆಟಗಾರ ಎನಿಸಿಕೊಂಡಿದ್ದರು. 31 ಎಸೆತಗಳಲ್ಲಿ 86 ರನ್ ಗಳಿಸಿ ಭಾರತಕ್ಕೆ 4 ವಿಕೆಟ್ ಗೆಲುವು ತಂದುಕೊಟ್ಟಿದ್ದರು.
ಸರಣಿಯ ಮೊದಲೆರಡು ಪಂದ್ಯಗಳಲ್ಲಿ 48 ಹಾಗೂ 45 ರನ್ ಗಳಿಸಿದ್ದಾರೆ.
ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದಾಗ ವೈಭವ್ ತನ್ನ ಅದ್ಭುತ ಪ್ರತಿಭೆಯನ್ನು ಅನಾವರಣಗೊಳಿಸಿದ್ದರು. ಕೇವಲ 35 ಎಸೆತಗಳಲ್ಲಿ ಶತಕವನ್ನು ಸಿಡಿಸಿ ಎಲ್ಲರ ಮನ ಗೆದ್ದಿದ್ದರು. ಟೂರ್ನಿಯ ಇತಿಹಾಸದಲ್ಲಿ ಶತಕ ಗಳಿಸಿದ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡಿದ್ದರು.
ಯೂತ್ ಏಕದಿನ ಕ್ರಿಕೆಟ್ ನಲ್ಲಿ ವೇಗದ ಶತಕಗಳು
-52 ಎಸೆತಗಳು: ವೈಭವ್ ಸೂರ್ಯವಂಶಿ-ಭಾರತದ ಅಂಡರ್-19-ಇಂಗ್ಲೆಂಡ್ ಅಂಡರ್-19-ವರ್ಸೆಸ್ಟರ್(2025)
53 ಎಸೆತಗಳು: ಕಾಮ್ರಾನ್ ಗುಲಾಮ್-ಪಾಕಿಸ್ತಾನ ಅಂಡರ್-19-ಇಂಗ್ಲೆಂಡ್ ಅಂಡರ್-19-ಲೈಸೆಸ್ಟರ್(2013)
68 ಎಸೆತಗಳು: ತಮೀಮ್ ಇಕ್ಬಾಲ್-ಬಾಂಗ್ಲಾದೇಶ ಅಂಡರ್-19-ಇಂಗ್ಲೆಂಡ್ ಅಂಡರ್-19, ಫತುಲ್ಲಾ(2005-06)
69 ಎಸೆತಗಳು: ರಾಜ್ ಅಂಗದ್ ಬಾವಾ-ಭಾರತದ ಅಂಡರ್-19-ಉಗಾಂಡ ಅಂಡರ್-19, ಟರೌಬ(2021-22)
70 ಎಸೆತಗಳು: ಶಾನ್ ಮಾರ್ಷ್-ಆಸ್ಟ್ರೇಲಿಯ ಅಂಡರ್-19-ಕೀನ್ಯ ಅಂಡರ್-19-ಡುನೆಡಿನ್(2001-02)