ಅತಿವೇಗದ ಫಿಫ್ಟಿ: ಭಾರತ ಟಿ20 ತಂಡದ ದಾಖಲೆಯ ಕಿರೀಟಕ್ಕೆ ಮತ್ತೊಂದು ಗರಿ!

ಗುವಾಹತಿ: ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ ಮತ್ತೊಂದು ಐತಿಹಾಸಿಕ ದಾಖಲೆ ಬರೆದಿದೆ. ಕೇವಲ 10 ಓವರ್‌ಗಳಲ್ಲೇ 155 ರನ್ ಚೇಸ್ ಮಾಡಿದ ಭಾರತೀಯ ಬ್ಯಾಟ್ಸ್ಮನ್‌ಗಳು, ಕೇವಲ 3.1 ಓವರ್‌ಗಳಲ್ಲಿ 50 ರನ್ ಪೂರೈಸುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.
ಇದು ಟಿ20 ವಿಶ್ವಕಪ್‌ಗೆ ಪೂರ್ವಭಾವಿಯಾಗಿ ಭಾರತದ ಟಿ20 ತಂಡದ ಬ್ಯಾಟಿಂಗ್ ಬಲವನ್ನು ಮತ್ತೊಮ್ಮೆ ಸಾಬೀತುಪಡಿಸಿತು. ಕಳೆದ ಐದು ವರ್ಷಗಳಲ್ಲಿ ದಾಖಲಾಗಿದ್ದ ಅನೇಕ ಸ್ಫೋಟಕ ಆರಂಭದ ದಾಖಲೆಗಳನ್ನು ರವಿವಾರ ಭಾರತೀಯ ಬ್ಯಾಟ್ಸ್ಮನ್‌ಗಳು ಅಳಿಸಿಹಾಕಿದರು.
ಎದುರಾಳಿ ತಂಡ ನೀಡಿದ ಗುರಿಯನ್ನು ಕೇವಲ 10 ಓವರ್‌ಗಳಲ್ಲೇ ತಲುಪಿದ ಭಾರತ, ಎಂಟು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ಐದು ಪಂದ್ಯಗಳ ಸರಣಿಯಲ್ಲಿ 3-0 ಅಜೇಯ ಮುನ್ನಡೆಯೊಂದಿಗೆ ಸರಣಿಯನ್ನು ಕೈವಶ ಮಾಡಿಕೊಂಡಿತು. ಇದರಲ್ಲೂ ಅಭಿಷೇಕ್ ಶರ್ಮಾ ಅವರ ನಿರ್ಭೀತ ಬ್ಯಾಟಿಂಗ್ ಹೊಸ ಯುಗದ ಟಿ20 ಮನಸ್ಥಿತಿಗೆ ಕನ್ನಡಿ ಹಿಡಿದಂತಿತ್ತು.
ಅಭಿಷೇಕ್ ಶರ್ಮಾ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದು, ಇದು ಭಾರತದ ಟಿ20 ಇತಿಹಾಸದಲ್ಲಿನ ಎರಡನೇ ವೇಗದ ಅರ್ಧಶತಕವಾಗಿದೆ. ಅವರು 20 ಎಸೆತಗಳಲ್ಲಿ 68 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರಿಗೆ ನಾಯಕ ಸೂರ್ಯಕುಮಾರ್ ಯಾದವ್ ಉತ್ತಮ ಸಾಥ್ ನೀಡಿದರು. ಸೂರ್ಯಕುಮಾರ್ 26 ಎಸೆತಗಳಲ್ಲಿ 57 ರನ್ ಚಚ್ಚಿ ಪಂದ್ಯವನ್ನು ಸಂಪೂರ್ಣ ಏಕಪಕ್ಷೀಯಗೊಳಿಸಿದರು. ಈ ಇಬ್ಬರು ಮುರಿಯದ ಮೂರನೇ ವಿಕೆಟ್‌ಗೆ ಕೇವಲ 40 ಎಸೆತಗಳಲ್ಲಿ 102 ರನ್‌ಗಳ ಭರ್ಜರಿ ಜೊತೆಯಾಟ ನಡೆಸಿದರು.
ಈ ಹಿಂದೆ ಭಾರತ ತಂಡವು 2023ರಲ್ಲಿ ಬಾಂಗ್ಲಾದೇಶ ವಿರುದ್ಧ 3.4 ಓವರ್‌ಗಳಲ್ಲಿ 50 ರನ್ ಗಳಿಸಿದ್ದು, ಅದು ತಂಡದ ವೇಗದ ಆರಂಭದ ದಾಖಲೆಯಾಗಿತ್ತು. ಅಲ್ಲದೆ ಸ್ಕಾಟ್ಲೆಂಡ್, ಆಸ್ಟ್ರೇಲಿಯಾ, ನೇಪಾಳ, ಜಿಂಬಾಬ್ವೆ ಹಾಗೂ ಇಂಗ್ಲೆಂಡ್ ವಿರುದ್ಧವೂ 3.5 ಓವರ್‌ಗಳಲ್ಲಿ 50 ರನ್ ಗಳಿಸಿತ್ತು. ಆದರೆ ಗುವಾಹತಿಯ ವೇಗ ಮಾತ್ರ ಎಲ್ಲ ದಾಖಲೆಗಳನ್ನು ಅಳಿಸಿಹಾಕಿತು.







