ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿರುವ ತಂದೆಯ ಆರೋಗ್ಯ ಸ್ಥಿತಿ ಗಂಭೀರ: 'ವಿಶ್ವಕಪ್' ತೊರೆದು ಮನೆಗೆ ಮರಳಿದ ರಿಂಕು ಸಿಂಗ್

ರಿಂಕು ಸಿಂಗ್ | PC : PTI
ಹೊಸದಿಲ್ಲಿ: ಪಿತ್ತಜನಕಾಂಗದ ಕ್ಯಾನ್ಸರ್ನಿಂದ ಬಳಲುತ್ತಿರುವ ತಮ್ಮ ತಂದೆಯ ಆರೋಗ್ಯ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಭಾರತದ ಕ್ರಿಕೆಟಿಗ ರಿಂಕು ಸಿಂಗ್ ಐಸಿಸಿ ಪುರುಷರ ಟಿ20 ವಿಶ್ವಕಪ್ ನಿಂದ ಮನೆಗೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾಹಿತಿಯ ಪ್ರಕಾರ, ರಿಂಕು ಅವರ ತಂದೆ ಹಂತ–4 ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಪ್ರಸ್ತುತ ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ. ಈ ಸಂಕಷ್ಟಕರ ಸಂದರ್ಭದಲ್ಲಿ ಕುಟುಂಬದ ಜೊತೆಗಿರಲು ರಿಂಕು ತುರ್ತಾಗಿ ಕ್ಯಾಂಪ್ ತೊರೆದಿದ್ದಾರೆ. ಟೂರ್ನಮೆಂಟ್ ಗೆ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಭಾಗವಾಗಿರುವ ಅವರು ಮತ್ತೆ ತಂಡವನ್ನು ಸೇರುವುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ಪರಿಸ್ಥಿತಿಯನ್ನು ತಂಡದ ಆಡಳಿತ ಮಂಡಳಿ ಸೂಕ್ಷ್ಮವಾಗಿ ಗಮನಿಸುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಎಡಗೈ ಬ್ಯಾಟರ್ ರಿಂಕು ಸಿಂಗ್ ಭಾರತ ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ವಿಶೇಷವಾಗಿ ಒತ್ತಡದ ಸಂದರ್ಭಗಳಲ್ಲಿ ಅಂತಿಮ ಹಂತದಲ್ಲಿ ನೀಡಿದ ಅವರ ಪ್ರದರ್ಶನ ತಂಡಕ್ಕೆ ಹಲವು ಬಾರಿ ಗೆಲುವು ತಂದುಕೊಟ್ಟಿದೆ. ಪಂದ್ಯಾವಳಿಯ ಕೊನೆಯ ಹಂತದಲ್ಲಿ ಅವರ ಅನುಪಸ್ಥಿತಿ ಕಂಡುಬಂದರೆ, ಅದು ತಂಡದ ಸಂಯೋಜನೆಗೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಮಂಗಳವಾರ ನಡೆದ ಅಭ್ಯಾಸದಲ್ಲಿ ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಅರ್ಶ್ದೀಪ್ ಸಿಂಗ್, ತಿಲಕ್ ವರ್ಮಾ, ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಸೇರಿದಂತೆ ಹಲವರು ಮೈದಾನದಲ್ಲಿ ಕಾಣಿಸಿಕೊಂಡರು. ಆದರೆ ರಿಂಕು ಅಭ್ಯಾಸದಲ್ಲಿ ಭಾಗವಹಿಸಲಿಲ್ಲ.
ವಿಶ್ವಕಪ್ನಲ್ಲಿ ಇದುವರೆಗೆ ರಿಂಕು ಮಿಶ್ರ ಪ್ರದರ್ಶನ ನೀಡಿದ್ದಾರೆ. ಬಹುತೇಕ ಪಂದ್ಯಗಳಲ್ಲಿ ಕೊನೆಯ ಹಂತದಲ್ಲಿ ಕ್ರೀಸ್ ಗೆ ಬಂದಿರುವ ಅವರು ಐದು ಇನ್ನಿಂಗ್ಸ್ಗಳಲ್ಲಿ ಕೇವಲ 24 ರನ್ ಗಳಿಸಿದ್ದು, ಎರಡು ಬಾರಿ ಅಜೇಯರಾಗಿದ್ದಾರೆ. 11* ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಈ ವರ್ಷ ಆಡಿದ 10 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಎಂಟು ಇನ್ನಿಂಗ್ಸ್ಗಳಲ್ಲಿ 28.75ರ ಸರಾಸರಿಯಲ್ಲಿ 115 ರನ್ ಗಳಿಸಿದ್ದು, 132.18ರ ಸ್ಟ್ರೈಕ್ ರೇಟ್ ಹಾಗೂ 44* ಅತ್ಯುತ್ತಮ ಸ್ಕೋರ್ ದಾಖಲಿಸಿದ್ದಾರೆ.
ಗುರುವಾರ ಚೆನ್ನೈನಲ್ಲಿ ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾ ಗೆಲ್ಲಲೇಬೇಕಾದ ಪಂದ್ಯವನ್ನು ಆಡಲಿದೆ. ಸೂಪರ್ ಎಂಟನೇ ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ಗಳ ಹೀನಾಯ ಸೋಲಿನ ಬಳಿಕ, ಪ್ರಶಸ್ತಿ ರಕ್ಷಣೆಯಲ್ಲಿ ಉಳಿಯಲು ಭಾರತ ತನ್ನ ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ದಕ್ಷಿಣ ಆಫ್ರಿಕಾ ತಂಡ ಸೂಪರ್ 8 ಹಂತವನ್ನು ಅಜೇಯವಾಗಿ ಮುಗಿಸುವತ್ತ ಸಾಗುತ್ತಿದೆ.






