ಫಿಡೆ ಗ್ರಾಂಡ್ ಸ್ವಿಸ್: ಪ್ರಶಸ್ತಿ ಉಳಿಸಿಕೊಂಡ ವೈಶಾಲಿ

ಆರ್. ವೈಶಾಲಿ (PC : PTI)
ಸಮರ್ಕಂಡ (ಉಝ್ಬೆಕಿಸ್ತಾನ), ಸೆ. 15: ಉಝ್ಬೆಕಿಸ್ತಾನದ ಸಮರ್ಕಂಡದಲ್ಲಿ ನಡೆದ ಫಿಡೆ ಮಹಿಳೆಯರ ಗ್ರಾಂಡ್ ಸ್ವಿಸ್ ಚೆಸ್ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಭಾರತದ ಆರ್. ವೈಶಾಲಿ ಸೋಮವಾರ ತನ್ನ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದಾರೆ. ಈ ಮೂಲಕ ಅವರು 2026ರ ಸಾಲಿನ ಫಿಡೆ ಮಹಿಳೆಯರ ಕ್ಯಾಂಡಿಡೇಟ್ಸ್ ಪಂದ್ಯಾವಳಿಗೆ ಅರ್ಹತೆ ಗಳಿಸಿಕೊಂಡಿದ್ದಾರೆ.
ವೈಶಾಲಿ ಅವರು ಮುಂದಿನ ಕ್ಯಾಂಡಿಡೇಟ್ಸ್ ಪಂದ್ಯಾವಳಿಗೆ ಅರ್ಹತೆ ಗಳಿಸಿರುವ 3ನೇ ಭಾರತೀಯ ಸ್ಪರ್ಧಿಯಾಗಿದ್ದಾರೆ. ಇದಕ್ಕೂ ಮೊದಲು ಭಾರತದ ದಿವ್ಯಾ ದೇಶಮುಖ್ ಮತ್ತು ಕೊನೆರು ಹಂಪಿ ಈ ಪಂದ್ಯಾವಳಿಗೆ ಅರ್ಹತೆ ಗಳಿಸಿಕೊಂಡಿದ್ದಾರೆ.
ದಿವ್ಯಾ ಮತ್ತು ಹಂಪಿ ಜೂನ್ನಲ್ಲಿ ಜಾರ್ಜಿಯದಲ್ಲಿ ನಡೆದ ಫಿಡೆ ಮಹಿಳೆಯರ ವಿಶ್ವಕಪ್ನಲ್ಲಿ ಫೈನಲ್ ತಲುಪುವುದರೊಂದಿಗೆ ಕ್ಯಾಂಡಿಡೇಟ್ಸ್ ಪಂದ್ಯಾವಳಿಯಲ್ಲಿ ತಮ್ಮ ಸ್ಥಾನಗಳನ್ನು ಕಾದಿರಿಸಿದ್ದರು. ಆ ಪಂದ್ಯಾವಳಿಯಲ್ಲಿ ದಿವ್ಯಾ ಪ್ರಶಸ್ತಿ ಗೆದ್ದಿದ್ದಾರೆ.
ಗ್ರಾಂಡ್ ಸ್ವಿಸ್ ಚೆಸ್ನಲ್ಲಿ ಸೋಮವಾರ 11ನೇ ಹಾಗೂ ಅಂತಿಮ ಸುತ್ತಿನಲ್ಲಿ ವೈಶಾಲಿ ತನ್ನ ಎದುರಾಳಿ ಚೀನಾದ ಟಾನ್ ರೆಗ್ಯಿರನ್ನು ಡ್ರಾಕ್ಕೆ ಹಿಡಿದಿಟ್ಟರು. ಇದರೊಂದಿಗೆ ಅವರು 8 ಅಂಕಗಳನ್ನು ಗಳಿಸಿದರು. ವೈಶಾಲಿ ಮತ್ತು ರಶ್ಯದ ಕ್ಯಾಟರೀನಾ ಲಗ್ನೊ ತಲಾ 8 ಅಂಕಗಳೊಂದಿಗೆ ಸಮಬಲರಾಗಿದ್ದರು. ಆದರೆ ಉತ್ತಮ ಟೈಬ್ರೇಕ್ ಸ್ಕೋರ್ ನ ಆಧಾರದಲ್ಲಿ ವೈಶಾಲಿಯನ್ನು ವಿಜಯಿ ಎಂಬುದಾಗಿ ಘೋಷಿಸಲಾಯಿತು.
ಅಂಕಪಟ್ಟಿಯ ಇಬ್ಬರು ಅಗ್ರ ಸ್ಥಾನಿಗಳಿಗೆ ಕ್ಯಾಂಡಿಡೇಟ್ಸ್ ಪಂದ್ಯಾವಳಿಯಲ್ಲಿ ಸ್ಥಾನ ಸಿಗುತ್ತದೆ.







