FIFA 2026 | ನೀರಸ ನಾಕೌಟ್ ದಾಖಲೆಯೊಂದಿಗೆ ವಿಶ್ವಕಪ್ ಅಭಿಯಾನ ಮುಗಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

ಕ್ರಿಸ್ಟಿಯಾನೊ ರೊನಾಲ್ಡೊ | Photo Credit : PTI
ಡಲ್ಲಾಸ್, ಜು.7: ಪೋರ್ಚುಗಲ್ ತಂಡವು ಸ್ಪೇನ್ ತಂಡದ ವಿರುದ್ಧ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯವನ್ನು ಸೋಲುವ ಮೂಲಕ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಫಿಫಾ ವಿಶ್ವಕಪ್ ಅಭಿಯಾನವು ನೋವಿನೊಂದಿಗೆ ಕೊನೆಗೊಂಡಿದೆ. 2026ರ ಆವೃತ್ತಿಯ ವಿಶ್ವಕಪ್ ಟೂರ್ನಿಯು ನನ್ನ ಪಾಲಿಗೆ ಕೊನೆಯದ್ದಾಗಿದ್ದು, ಮತ್ತೊಂದು ವಿಶ್ವಕಪ್ ಟೂರ್ನಿಯಲ್ಲಿ ನಾನು ಆಡಲಾರೆ ಎಂದು ಲೆಜೆಂಡರಿ ಫಾರ್ವರ್ಡ್ ಆಟಗಾರ ರೊನಾಲ್ಡೊ ದೃಢಪಡಿಸಿದರು.
ದಾಖಲೆಗಳು, ಗೋಲುಗಳು ಹಾಗೂ ಅಂತರ್ರಾಷ್ಟ್ರೀಯ ಸಾಧನೆಗಳ ಮೂಲಕ ರೊನಾಲ್ಡೊ ಅವರು ಅಸಾಧಾರಣ ಪರಂಪರೆಯನ್ನು ಬಿಟ್ಟುಹೋಗಿದ್ದಾರೆ. ಆದರೆ ಅವರ ವಿಶ್ವಕಪ್ ಟೂರ್ನಿಯ ನಾಕೌಟ್ ಹಂತದ ಪ್ರದರ್ಶನವು ಅಚ್ಚರಿ ಮೂಡಿಸುವಂತಿದೆ. ಆರು ವಿಶ್ವಕಪ್ ಪಂದ್ಯಾವಳಿಗಳಲ್ಲಿ 10 ನಾಕೌಟ್ ಪಂದ್ಯಗಳನ್ನು ಆಡಿರುವ ಪೋರ್ಚುಗಲ್ ಸ್ಟಾರ್ ರೊನಾಲ್ಡೊ ಕೇವಲ ಒಂದು ಗೋಲು ಗಳಿಸಿದ್ದಾರೆ.
ಐದು ಬಾರಿ ಬ್ಯಾಲನ್ ಡಿ’ಓರ್ ಪ್ರಶಸ್ತಿ ವಿಜೇತ ರೊನಾಲ್ಡೊ ಅವರು ಪ್ರಸಕ್ತ ಟೂರ್ನಿಯಲ್ಲಿ ಕ್ರೊಯೇಷಿಯಾ ತಂಡದ ವಿರುದ್ಧ ಆಡಿರುವ ಅಂತಿಮ-32ರ ಪಂದ್ಯದಲ್ಲಿ ತನ್ನ ಏಕೈಕ ನಾಕೌಟ್ ಗೋಲು ಗಳಿಸಿದ್ದರು. ವಿಶ್ವಕಪ್ ಫುಟ್ಬಾಲ್ನಲ್ಲಿ ನಾಕೌಟ್ ಹಂತದಲ್ಲಿ ಕಳೆದ ಎರಡು ದಶಕಗಳಿಂದ ಎದುರಿಸುತ್ತಿದ್ದ ಗೋಲಿನ ಬರವನ್ನು ನೀಗಿಸಿಕೊಂಡಿದ್ದರು.
‘‘ನಾನು ನನ್ನ ಶ್ರೇಷ್ಠ ಪ್ರದರ್ಶನ ನೀಡಿ, ಸ್ಪಷ್ಟ ಮನಃಸಾಕ್ಷಿಯೊಂದಿಗೆ ವಿಶ್ವಕಪ್ ತೊರೆಯುವೆ ಎಂದು ನಾನು ನಿನ್ನೆಯ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೆ. ಕೆಲವೊಮ್ಮೆ ಗೆಲ್ಲುತ್ತೇನೆ, ಇನ್ನೂ ಕೆಲವೊಮ್ಮೆ ಸೋಲುತ್ತೇವೆ. ಇದು ನನ್ನ ಕೊನೆಯ ವಿಶ್ವಕಪ್ ಟೂರ್ನಿಯಾಗಿದೆ. ಇದೀಗ ನನ್ನ ಕುಟುಂಬದೊಂದಿಗೆ ಸಮಯ ಕಳೆಯುವೆ. ತಂಡ ಸೋತಿರುವುದಕ್ಕೆ ಈ ನಿರ್ಧಾರ ತೆಗೆದುಕೊಂಡಿಲ್ಲ’’ ಎಂದು ರೊನಾಲ್ಡೊ ಹೇಳಿದರು.
ರೊನಾಲ್ಡೊ ಅವರು ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 27 ಪಂದ್ಯಗಳನ್ನು ಆಡಿದ್ದಾರೆ. ಲಿಯೊನೆಲ್ ಮೆಸ್ಸಿ(30 ಪಂದ್ಯಗಳು)ನಂತರ ಗರಿಷ್ಠ ಪಂದ್ಯಗಳನ್ನಾಡಿದ ಎರಡನೇ ಆಟಗಾರನಾಗಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 11 ಗೋಲುಗಳನ್ನು ಗಳಿಸಿದ್ದಾರೆ. ವಿವಿಧ ಆರು ವಿಶ್ವಕಪ್ ಟೂರ್ನಿಗಳಲ್ಲಿ ಗೋಲು ಗಳಿಸಿದ ಮೊದಲ ಫುಟ್ಬಾಲ್ ಆಟಗಾರನಾಗಿದ್ದಾರೆ.
ರೊನಾಲ್ಡೊ ತನ್ನ ಕೊನೆಯ ವಿಶ್ವಕಪ್ ಟೂರ್ನಿಯಲ್ಲಿ ಮೂರು ಗೋಲುಗಳನ್ನು ಗಳಿಸಿದ್ದಾರೆ. ಉಜ್ಬೇಕಿಸ್ತಾನ ತಂಡದ ವಿರುದ್ಧ 5-0 ಅಂತರದಿಂದ ಗೆದ್ದಿರುವ ಗ್ರೂಪ್ ಹಂತದ ಪಂದ್ಯದಲ್ಲಿ ಪೋರ್ಚುಗಲ್ ಪರ ಎರಡು ಗೋಲು ಗಳಿಸಿದ್ದರು. ಕ್ರೊಯೇಷಿಯಾ ತಂಡದ ವಿರುದ್ಧ ಪೆನಾಲ್ಟಿ ಸ್ಪಾಟ್ನಲ್ಲಿ ಗೋಲು ಗಳಿಸಿದ್ದರು. ನಾಕೌಟ್ ಪಂದ್ಯದಲ್ಲಿ ಮೊದಲ ಬಾರಿ ಗೋಲು ಗಳಿಸಿ ಇತಿಹಾಸ ನಿರ್ಮಿಸಿದ್ದರು.
ರೊನಾಲ್ಡೊ ಅವರು ತಮ್ಮ ಯಶಸ್ವಿ ವೃತ್ತಿಜೀವನದಲ್ಲಿ ವಿಶ್ವಕಪ್ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. 2006ರಲ್ಲಿ ರೊನಾಲ್ಡೊ ಆಡಿದ್ದ ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿ ಪೋರ್ಚುಗಲ್ ತಂಡ ಸೆಮಿ ಫೈನಲ್ಗೆ ತಲುಪಿತ್ತು. ಆ ನಂತರ ಉತ್ತಮ ಸಾಧನೆ ಮಾಡಿಲ್ಲ.






